ಡೈಲಿ ವಾರ್ತೆ:28 ಮಾರ್ಚ್ 2023
ಬ್ರಹ್ಮಾವರ: ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ, ಜಾಥಾ: ಬೇಡಿಕೆ ಈಡೇರದಿದ್ದರೆ ಎ.4ಕ್ಕೆ ಬ್ರಹ್ಮಾವರ ಬಂದ್ -ಹೆದ್ದಾರಿ-66 ಉಳಿಸಿ ಸಮಿತಿ
ಬ್ರಹ್ಮಾವರ: ಭದ್ರಗಿರಿಯಿಂದ ಮಾಬುಕಳ ಸೇತುವೆಯವರೆಗೆ ಸರ್ವಿಸ್ ರಸ್ತೆಯನ್ನು ನಿರ್ಮಿಸುವಂತೆ ಹಾಗೂ ಉಪ್ಪಿನಕೋಟೆ ಮತ್ತು ದೂಪದ ಕಟ್ಟೆಯಲ್ಲಿ ಮೀಡಿಯನ್ ಓಪನಿಂಗ್ ನೀಡುವಂತೆ ಒತ್ತಾಯಿಸಿ ಮಂಗಳವಾರ ರಾಷ್ಟ್ರೀಯ ಹೆದ್ದಾರಿ-66 ಉಳಿಸಿ ಸಮಿತಿಯ ವತಿಯಿಂದ ಪ್ರತಿಭಟನಾ ಸಭೆ, ತಹಶೀಲ್ದಾರರ ಕಚೇರಿವರೆಗೆ ಜಾಥಾ ಹಾಗೂ ಧರಣಿ ನಡೆಯಿತು.
ಬ್ರಹ್ಮಾವರದಲ್ಲಿ ಜನರ ಸುಗಮ ಸಂಚಾರಕ್ಕೆ ಅಗತ್ಯವಾಗಿರುವ ಸರ್ವಿಸ್ ರಸ್ತೆ ನಿರ್ಮಿಸದ್ದಿದ್ದರೆ ಹಾಗೂ ಮೀಡಿಯನ್ ಓಪನ್ ಮಾಡುವ ಕುರಿತು ಸೂಕ್ತ ಕ್ರಮ ಕೈಗೊಂಡು ಭರವಸೆ ನೀಡದಿದ್ದರೆ ಎಪ್ರಿಲ್ 4ರಂದು ಬ್ರಹ್ಮಾವರದಲ್ಲಿ ಬಂದ್ ಆಚರಿಸಲಾಗುವುದು ಎಂದು ಸಮಿತಿಯ ಸಂಚಾಲಕ ಬಿ.ಗೋವಿಂದರಾಜ್ ಹೆಗ್ಡೆ ತಿಳಿಸಿದ್ದಾರೆ.
ಆದರೆ ಜನರಿಗೆ ತೊಂದರೆ ಆಗದಿರಲಿ ಎಂದು ಎರಡು ಗಂಟೆಗಳ ಕಾಲ ಮಾತ್ರ ಬಂದ್ ಆಚರಿಸಲು ನಿರ್ಣಯ ಕೈಗೊಳ್ಳಲಾಗುವುದು ಎಂದು ಬ್ರಹ್ಮಾವರ ಫೌಂಡೇಶನ್‌ನ ಆಡಳಿತ ಟ್ರಸ್ಟಿಯೂ ಆಗಿರುವ ಹೆಗ್ಡೆ ನುಡಿದರು.
ರಾಷ್ಟ್ರೀಯ ಹೆದ್ದಾರಿ-66 ಉಳಿಸಿ ಸಮಿತಿ ಹಾಗೂ ಬ್ರಹ್ಮಾವರ ಫೌಂಡೇಶನ್ ಜಂಟಿ ಆಶ್ರಯದಲ್ಲಿ ಉಪ್ಪಿನಕೋಟೆಯ ಹೊಟೇಲ್ ಫಾರ್ಚ್ಯೂನ್ ಪಕ್ಕದ ಖಾಸಗಿ ಸ್ಥಳದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಗೋವಿಂದರಾಜ್ ಹೆಗ್ಡೆ, ಬ್ರಹ್ಮಾವರ ಸಮೀಪದ ಭದ್ರಗಿರಿಯಿಂದ ಮಾಬುಕಳ ಸೇತುವೆವರೆಗೆ ಸರ್ವಿಸ್ ರಸ್ತೆ ರಚನೆ ಹಾಗೂ ಉಪ್ಪಿನಕೋಟೆ ಮತ್ತು ದೂಪದಕಟ್ಟೆಯಲ್ಲಿ ಮೀಡಿಯನ್ ಓಪನ್ ನೀಡಬೇಕೆಂದು ಆಗ್ರಹಿಸಿದರು.
ಎಲ್ಲಿಯೇ ಆದರೂ ಅವೈಜ್ಞಾನಿಕ ರಸ್ತೆ ನಿರ್ಮಾಣ ಸರಿಯಲ್ಲ. ಸರ್ವಿಸ್ ರಸ್ತೆ ನಿರ್ಮಾಣ ಆಗದಿದ್ದಲ್ಲಿ ಜನರು ಪ್ರಾಣ ಕಳಕೊಳ್ಳಬೇಕಾಗುತ್ತದೆ ಎಂದು ಉಡುಪಿ ಜಿಲ್ಲಾ ಬಸ್ ಮಾಲಕರ ಸಂಘದ ಉಪಾಧ್ಯಕ್ಷ ಕುಂದಾಪುರದ ಸದಾನಂದ ಚಾತ್ರ ಹೇಳಿದರು.
ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದ ಹಾಗೂ ಸರ್ವಿಸ್ ರಸ್ತೆಯಲ್ಲಿ ಬೇಕಾದ ಸ್ಥಳದಲ್ಲಿ ಓಪನ್ ಇಲ್ಲದೇ ಇರುವುದರಿಂದ ಬ್ರಹ್ಮಾವರದಲ್ಲಿ ವಾಹನ ಚಾಲಕರು ಒಂದು ಕಿ.ಮೀ. ಸುತ್ತಬೇಕಾದ ಸ್ಥಳದಲ್ಲಿ 3 ಕಿ.ಮೀ. ಸುತ್ತುವ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ ತಿಳಿಸಿದರು.
ಬ್ರಹ್ಮಾವರ ಎಸ್‌ಎಂಎಸ್ ಚರ್ಚ್ ಧರ್ಮಗುರು ವಂ. ಲಾರೆನ್ಸ್ ಡೇಡ್ ಕ್ರಾಸ್ತಾ ಮಾತನಾಡಿ, ಹೆದ್ದಾರಿ ನಿರ್ಮಾಣದ ನಂತರ ಇದುವರೆಗೆ ಒಟ್ಟು 40 ಮಂದಿ ಪ್ರಾಣ ಕಳಕೊಂಡಿದ್ದು ನೂರಾರು ಜನರಿಗೆ ಪೆಟ್ಟಾಗಿದೆ ಎಂದು ಮಾಹಿತಿ ನೀಡಿದರು.
ಪ್ರತಿಭಟನಾ ಸಭೆಯಲ್ಲಿ ಜಿಪಂನ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಬಿ.ಎನ್ ಶಂಕರ ಪೂಜಾರಿ, ಸಿಐಟಿಯು ಜಿಲ್ಲಾ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ನಿವೃತ್ತ ಪ್ರಾಂಶುಪಾಲ ವೈ.ರವೀಂದ್ರನಾಥ ರಾವ್ ಮುಂತಾದವರು ಮಾತನಾಡಿದರು.
ಸಭೆಯಲ್ಲಿ ಉದ್ಯಮಿ ಮಡಾಮಕ್ಕಿ ಶಶಿಧರ ಶೆಟ್ಟಿ, ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ರಾಜು ಸಾಲ್ಯಾನ್, ಟ್ಯಾಕ್ಸಿ ಮಾಲಕರ ಸಂಘದ ಅಧ್ಯಕ್ಷ ರಮೇಶ್, ಟೆಂಪೋ ಮತ್ತು ಲಾರಿ ಮಾಲಕರ ಸಂಘದ ಅಧ್ಯಕ್ಷ ಜಯಕುಮಾರ್ ಭಾಗವಹಿಸಿದ್ದರು. ಅಲ್ಬರ್ಟ್ ಮೊಂತೆರೋ ಕಾರ್ಯಕ್ರಮ ನಿರೂಪಿಸಿದರು.
ಪ್ರತಿಭಟನಾ ಸಭೆಯ ನಂತರ ಉಪ್ಪಿನಕೋಟೆ ಜಂಕ್ಷನ್‌ನಿಂದ ರಾಷ್ಟ್ರೀಯ ಹೆದ್ದಾರಿಯ ಮೂಲಕ ಬ್ರಹ್ಮಾವರ ಬಸ್‌ನಿಲ್ದಾಣ ಮಾರ್ಗವಾಗಿ ಬ್ರಹ್ಮಾವರ ತಹಶೀಲ್ದಾರ್‌ರ ಕಚೇರಿಗೆ ತೆರಳಿ ತಹಶೀಲ್ದಾರ್ ರಾಜ್‌ಶೇಖರ್ ಮೂರ್ತಿ ಅವರಿಗೆ ಈ ಸಂಬಂಧ ಮನವಿ ಸಲ್ಲಿಸಲಾಯಿತು. ಈ ಬಗ್ಗೆ ಜಿಲ್ಲಾಧಿಕಾರಿ ಯವರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ರಾಜಶೇಖರ ಮೂರ್ತಿ ಭರವಸೆ ನೀಡಿದರು.