ಡೈಲಿ ವಾರ್ತೆ:02 ಏಪ್ರಿಲ್ 2023

ಕುಂದಾಪುರ: ಆಕ್ರಮ ಮರಳು ಮಾಫಿಯಾದಿಂದ ಮಾರಣಾಂತಿಕ ಹಲ್ಲೆ, ದೂರು ಪ್ರತಿ ದೂರು ದಾಖಲು!

ಕುಂದಾಪುರ: ತಾಲೂಕಿನ ಜಪ್ತಿ ಗ್ರಾಮದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂದು ಮರಳು ಮಾಫಿಯಾದ ವಿರುದ್ದ ಕುಂದಾಪುರ ತಹಸೀಲ್ದಾರರಿಗೆ ಹಾಗೂ ಲೋಕಾಯುಕ್ತರಿಗೆ ದೂರು ನೀಡಿ ಸಾಕ್ಷ್ಯ ಚಿತ್ರ ತೆಗೆಯುತ್ತಿದ್ದ ಹಿನ್ನಲೆಯಲ್ಲಿ ದೂರುದಾರರಿಗೆ ಮರಳು ಮಾಫಿಯದವರಿಂದ ಮಾರಣಾಂತಿಕ ಹಲ್ಲೆ ನಡೆದ ಘಟನೆ ಶನಿವಾರ ಜಪ್ತಿಯಲ್ಲಿ ನಡೆದಿದೆ.

ಘಟನೆ ಹಿನ್ನಲೆ: ಮೊಳಹಳ್ಳಿ ಗ್ರಾಮದ ಪ್ರತಾಪ್ ಶೆಟ್ಟಿ (32)ಎಂಬವರೇ ಮರಳು ಮಾಫಿಯಾದಿಂದ ಮಾರಕ ಹಲ್ಲೆಗಿಡಾಗಿ ಆಸ್ಪತ್ರೆ ಸೇರಿದವರು. ಜಪ್ತಿ ಗ್ರಾಮದ ವಾರಾಹಿ ನದಿ ದಡದಲ್ಲಿ ಪ್ರತಾಪ್ ಶೆಟ್ಟರ ಅಜ್ಜಿಯ ಜಾಗ ಇದೆ. ಈ ಜಾಗದ ನದಿಯ ದಂಡೆಯಲ್ಲಿ ಪ್ರೇಮಾನಂದ ಶೆಟ್ಟಿ ಕಡೆಯವರು ಅಕ್ರಮವಾಗಿ ಮರಳುಗಾರಿಕೆ ಮಾಡುತ್ತಿದ್ದರಿಂದ ಪ್ರತಾಪ್ ಶೆಟ್ಟಿಯ ಅಜ್ಜಿಯ ಜಾಗವು ಕುಸಿದಿತ್ತು ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಹಕ್ಕಿನಡಿ ಸಂಪೂರ್ಣ ವಿವರ ಪಡೆದು,ಸ್ಥಳ ಪರಿಶೀಲನೆ ನಡೆಸಿ, ಅಕ್ರಮ ಮರಳುಗಾರಿಕೆಯನ್ನು ನಿಲ್ಲಿಸುವಂತೆ ಪ್ರತಾಪ್ ಶೆಟ್ಟಿಯವರು ಕುಂದಾಪುರ ತಹಶೀಲ್ದಾರ್ ಮತ್ತು ಲೋಕಾಯುಕ್ತಕ್ಕೆ ದೂರು ನೀಡಿದ್ದರು.ಈ ನಡುವೆ ಪ್ರತಾಪ್ ಶೆಟ್ಟಿಯವರ ಮೊಬೈಲ್ ಗೆ ಹಲವು ನಂಬರ್ ಗಳಿಂದ ಜೀವ ಬೆದರಿಕೆ ಕರೆಗಳು ಬಂದಿರುವ ಬಗ್ಗೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದೂರನ್ನು ಸಹಾ ನೀಡಿದ್ದಾರೆನ್ನಲಾಗಿದೆ.
ಆಕ್ರಮ ಮರಳುಗಾರಿಕೆ ನಡೆಯುವ ಬಗ್ಗೆ ಸೂಕ್ತ ದಾಖಲಾತಿ ಹಾಜರುಪಡಿಸುವಂತೆ ಪಿರ್ಯಾದಿದಾರ ಪ್ರತಾಪ್ ಶೆಟ್ಟಿಗೆ ಅಧಿಕಾರಿಗಳು ಹಿಂಬರಹ ನೀಡಿದ್ದು, ಈ ಸಂಬಂಧ ಪ್ರತಾಪ್ ಶೆಟ್ಟಿಯವರು ತನ್ನ ಅಜ್ಜಿಯ ಜಾಗದಲ್ಲಿ ನಿಂತು ಅಕ್ರಮ ಮರಳು ತೆಗೆಯುವ ಫೋಟೋಗಳನ್ನು ತೆಗೆಯುತ್ತಿರುವಾಗ ಪ್ರೇಮಾನಂದ ಶೆಟ್ಟಿ ಮತ್ತು ಸುಮಾರು 8 ರಿಂದ 10 ಜನ ಸೇರಿಕೊಂಡು ಪ್ರತಾಪ್ ಶೆಟ್ಟಿ ಬಳಿ ಬಂದು ಅವಾಚ್ಯ ಶಬ್ದಗಳಿಂದ ಬೈದು ಲೋಕಾಯುಕ್ತರಿಗೆ ಮತ್ತು ತಹಸಿಲ್ದಾರರಿಗೆ ಕಂಪ್ಲೇಂಟ್ ಮಾಡ್ತೀಯಾ ಎಂದು ಪ್ರಶ್ನಿಸಿ ಮರದ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ, ಈ ಬಗ್ಗೆ ಪೊಲೀಸ್ ದೂರು ನೀಡಿದರೆ ನಿನ್ನನ್ನು ಕೊಲ್ಲುವುದೇ ಬಿಡುವುದಿಲ್ಲ ಎಂದು ಆರೋಪಿಗಳು ಜೀವ ಬೆದರಿಕೆ ಹಾಕಿದ್ದಾರೆ ಎಂದೂ ದೂರಿನಲ್ಲಿ ಹೇಳಲಾಗಿದೆ. ಅಲ್ಲದೆ ಈ ಸಂದರ್ಭ ತನ್ನ ಮೊಬೈಲ್ ಫೋನ್, ಕಾರಿನ ಕೀ, ಹಾಗೂ 40 ಸಾವಿರ ಇರುವ ಪರ್ಸ್ ದೋಚಿದ್ದಾರೆ ಎಂದು ಪ್ರತಾಪ್ ಶೆಟ್ಟಿ ಹೇಳಿದ್ದಾರೆ.
ಪ್ರತಾಪರ ಮುಖಕ್ಕೆ, ಕಣ್ಣಿನ ಭಾಗಕ್ಕೆ ಬೆನ್ನಿನ ಹಿಂಬದಿಗೆ ಮತ್ತು ಕೈಗಳಿಗೆ ತೀವ್ರ ಗಾಯಗಲಾಗಿದ್ದು,ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.


ಪ್ರತಿ ದೂರು: ಪ್ರಕರಣದಲ್ಲಿ ಪ್ರತಿ ದೂರು ದಾಖಲಿಸಲಾಗಿದ್ದು, ಪಿರ್ಯಾದಿದಾರರಾದ ಪ್ರೇಮಾನಂದ ಶೆಟ್ಟಿ (40), ಇವರು ಹಳ್ನಾಡು ಮತ್ತು ಜಪ್ತಿ ಗ್ರಾಮದಲ್ಲಿ ಹರಿಯುವ ವರಾಹಿ ನದಿ ದಡದಲ್ಲಿ ಕಾನೂನು ರೀತ್ಯಾ ಅನುಮತಿ ಪಡೆದುಕೊಂಡು ಸಕ್ರಮವಾಗಿ ಸ್ಯಾಂಡ್‌ ಬ್ಲಾಕ್‌ ವ್ಯವಹಾರ ನಡೆಸುತ್ತಿದ್ದು ಆದರೆ ಮೊಳಹಳ್ಳಿ ಪ್ರತಾಪ ಶೆಟ್ಟಿ ಎಂಬಾತನು ಸ್ಯಾಂಡ್‌ ವ್ಯವಹಾರದ ಬಗ್ಗೆ ಹಣ ನೀಡುವಂತೆ ಇಲ್ಲದಿದ್ದರೆ ಗಣಿ ಇಲಾಖೆಗೆ, ಲೋಕಾಯುಕ್ತರಿಗೆ ಮತ್ತು ತಹಶೀಲ್ದಾರರಿಗೆ ದೂರು ನೀಡುವುದಾಗಿ ಹೇಳಿದ್ದು, ಹಣ ನೀಡದೇ ಇದ್ದುದಕ್ಕೆ ದಿನಾಂಕ 01/04/2023 ರಂದು ಸ್ಯಾಂಡ್‌ ಬ್ಲಾಕ್‌ ಬಳಿ ಪ್ರತಾಪ ಶೆಟ್ಟಿಯು ಪೋಟೋ ತೆಗೆಯುತ್ತಿದ್ದು, ಆಗ ಪಿರ್ಯಾಧಿದಾರರು ಪ್ರತಾಪ ಶೆಟ್ಟಿಯ ಬಳಿ ಹೋಗಿ ಯಾಕೆ ಪೋಟೋ ತೆಗೆಯುತ್ತೀಯಾ ಎಂದು ಕೇಳಿದಾಗ ಪ್ರತಾಪ ಶೆಟ್ಟಿಯು ಅವಾಚ್ಯವಾಗಿ ಬೈಯುತ್ತಾ ಅಲ್ಲೆ ಬಿದ್ದಿದ್ದ ಒಂದು ಮರದ ದೊಣ್ಣೆಯಿಂದ ಪಿರ್ಯಾದಿದಾರರ ಕೈ ಭುಜಕ್ಕೆ, ಕಾಲುಗಳಿಗೆ ಮತ್ತು ಬೆನ್ನಿಗೆ ಹೊಡೆದಿದ್ದು ಆಗ ಪಿರ್ಯಾದಿದಾರರು ಬೊಬ್ಬೆ ಹಾಕುತ್ತಿದ್ದುದನ್ನು ನೋಡಿ ಕೆಲಸದವರಾದ ಸದಾಶಿವ, ಪ್ರಕಾಶ ಕುಲಾಲ ಮತ್ತು ಮಂಜುನಾಥ ರವರು ತಪ್ಪಿಸಲು ಬಂದಿದ್ದು ಆಗ ಅದೇ ದೊಣ್ಣೆಯಿಂದ ಅವರಿಗೂ ಕೂಡಾ ಪ್ರತಾಪ ಶೆಟ್ಟಿಯು ಬೀಸಿ ಹೊಡೆದಿದ್ದು ನಂತರ ಎಂದು ಜೀವ ಬೆದರಿಕೆ ಹಾಕಿರುವುದಾಗಿ ಪ್ರೇಮಾನಂದ ಶೆಟ್ಟಿ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 20/2023 ಕಲಂ: 384, 323, 324, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.