ಡೈಲಿ ವಾರ್ತೆ: ಫೆ./13/2026

ಹೊಸಕೋಟೆ ಸಮೀಪ ಭೀಕರ ಸರಣಿ ಅಪಘಾತ: ಕಾರು, ಬೈಕ್, ಕ್ಯಾಂಟರ್ ಡಿಕ್ಕಿಯಲ್ಲಿ 7 ಜನ ದುರ್ಮರಣ

ದೇವನಹಳ್ಳಿ, ಫೆ. 13: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಎಂ. ಸತ್ಯವರ ಗ್ರಾಮದ ಬಳಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ದುರ್ಮರಣ ಹೊಂದಿದ ದಾರುಣ ಘಟನೆ ನಡೆದಿದೆ.

ಹೊಸಕೋಟೆ–ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ಯಾಂಟರ್ ವಾಹನ, ಬೈಕ್ ಹಾಗೂ ಎಕ್ಸ್‌ಯುವಿ ಕಾರಿನ ನಡುವೆ ಸರಣಿ ಡಿಕ್ಕಿ ಸಂಭವಿಸಿದೆ.

ಪ್ರಾಥಮಿಕ ಮಾಹಿತಿಯಂತೆ, ಅತಿವೇಗದಲ್ಲಿ ಸಾಗುತ್ತಿದ್ದ ಎಕ್ಸ್‌ಯುವಿ ಕಾರು ಮೊದಲು ಮುಂದೆ ಹೋಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದು, ಬಳಿಕ ನಿಯಂತ್ರಣ ತಪ್ಪಿ ಕ್ಯಾಂಟರ್ ವಾಹನಕ್ಕೆ ಗುದ್ದಿದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ.

ಘಟನೆಯಲ್ಲಿ ಕಾರಿನಲ್ಲಿದ್ದ ಆರು ಮಂದಿ ಮತ್ತು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಆರು ಮಂದಿ ಬೆಂಗಳೂರಿನ ಕೊತ್ತನೂರು ಮೂಲದವರು ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಎಸ್‌ಪಿ ಚಂದ್ರಕಾಂತ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಮೇಲ್ನೋಟಕ್ಕೆ ಅತಿವೇಗವೇ ಅಪಘಾತಕ್ಕೆ ಕಾರಣವಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹಗಳನ್ನು ಹೊಸಕೋಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.