ಡೈಲಿ ವಾರ್ತೆ: ಫೆ./13/2026

ತುಮಕೂರಿನಲ್ಲಿ ದಾರುಣ ಘಟನೆ: ಆಸ್ತಿ ದಾಹ ಮತ್ತು ಮೂಢನಂಬಿಕೆಯ ಹಾವಳಿ – ತಾಯಿಯನ್ನೇ ಕೊಂದ ಮಗಳು

ತುಮಕೂರು, ಫೆ. 13: ತುಮಕೂರು ನಗರದ ಶ್ರೀನಗರ ಪ್ರದೇಶದಲ್ಲಿ ಹೆತ್ತ ತಾಯಿಯನ್ನೇ ಮಗಳು ಉಸಿರುಗಟ್ಟಿಸಿ ಕೊಂದ ದಾರುಣ ಘಟನೆ ಬೆಳಕಿಗೆ ಬಂದಿದೆ.

ಪುಷ್ಪಲತಾ (55) ಮೃತ ದುರ್ದೈವಿ. ಸುಚಿತ್ರಾ (35) ತಾಯಿಯನ್ನು ಕೊಲೆಗೈದ ಮಗಳು ಎಂದು ಗುರುತಿಸಲಾಗಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಪುಷ್ಪಲತಾ ಅವರ ಹೆಸರಲ್ಲಿ ಒಂದು ಮನೆ ಹಾಗೂ ಬ್ಯಾಂಕ್ ಖಾತೆಯಲ್ಲಿ ಸುಮಾರು 40 ಲಕ್ಷ ರೂಪಾಯಿ ಠೇವಣಿ ಇತ್ತು. ಈ ಆಸ್ತಿಯನ್ನು ಕಬಳಿಸುವ ಉದ್ದೇಶದಿಂದಲೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಇನ್ನೊಂದೆಡೆ, ಸುಚಿತ್ರಾಳ ತಂದೆ ಕಳೆದ ಒಂದೂವರೆ ವರ್ಷಗಳ ಹಿಂದೆ ನಿಧನರಾಗಿದ್ದು, ಅವರ ಸಾವಿಗೆ ತಾಯಿಯೇ ಮಾಟ–ಮಂತ್ರ ಮಾಡಿಸಿದ್ದಾಳೆ ಎಂದು ಜ್ಯೋತಿಷಿಯೊಬ್ಬ ಹೇಳಿದ್ದಾನೆ ಎಂಬ ಮಾಹಿತಿ ಹೊರಬಂದಿದೆ. ಈ ಮೂಢನಂಬಿಕೆಯನ್ನು ನಂಬಿದ ಸುಚಿತ್ರಾ ತಾಯಿಯನ್ನು ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಸುಚಿತ್ರಾ ಹಾಗೂ ಆಕೆಗೆ ಸಹಕರಿಸಿದ ಗಂಡ ಸುರೇಶ್ ಅವರನ್ನು ಕ್ಯಾತಸಂದ್ರ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಈ ಘಟನೆ ನಗರದಲ್ಲಿ ಆಘಾತ ಉಂಟುಮಾಡಿದ್ದು, ಆಸ್ತಿ ಲಾಲಸೆ ಮತ್ತು ಮೂಢನಂಬಿಕೆಗಳ ಭೀಕರ ಪರಿಣಾಮದ ಬಗ್ಗೆ ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ.