ಡೈಲಿ ವಾರ್ತೆ:04 ಏಪ್ರಿಲ್ 2023

ಬ್ರಹ್ಮಾವರ: ಎ.6ರಿಂದ ಭೂಮಿಕಾ ಹಾರಾಡಿಯ ಬಣ್ಣ ನಾಟಕೋತ್ಸವ

ಬ್ರಹ್ಮಾವರ: ನಾಟಕಗಳಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲೇ ಹೆಸರು ಮಾಡಿರುವ ಭೂಮಿಕಾ ಹಾರಾಡಿ ತನ್ನ 25ನೇ ವರ್ಷದ ಸಂಭ್ರಮದಲ್ಲಿದ್ದು, ಈ ಪ್ರಯುಕ್ತ ಭೂಮಿಕಾ ತಂಡವು ತನ್ನ ವಾರ್ಷಿಕ ಸಂಭ್ರಮ ‘ಬಣ್ಣ-9’ನ್ನು ವಿಶಿಷ್ಠವಾಗಿ ಆಚರಿಸುತ್ತಿದೆ.

ಬ್ರಹ್ಮಾವರದ ಎಸ್ಎಂಎಸ್ ಪದವಿ ಪೂರ್ವ ಕಾಲೇಜಿನ ಮಕ್ಕಳ ಮಂಟಪದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಎ.6ರಿಂದ ಎ.13ರವರೆಗೆ ನಡೆಯಲಿರುವ ಈ ನಾಟಕೋತ್ಸವದಲ್ಲಿ ಎ.6ರಂದು ಶಿಕ್ಷಕರ ಬಳಗ ಉಡುಪಿ ಇವರ ಬರ್ಬರೀಕ, ಎ.7ರಂದು ರಂಗಾಯಣ ಶಿವಮೊಗ್ಗ ಇವರ ಹಕ್ಕಿಕಥೆ, ಎ.8ರಂದು ನವೋದಯ ಮೈಸೂರು ಪ್ರಸ್ತುತಿಯ ಅಯೋಧ್ಯಾ ಕಾಂಡ, ಎ.9ರಂದು ರಂಗಸೌರಭ ಬೆಂಗಳೂರು ಅಭಿನಯದ ನಾಟಕ ಮಾವಿಗುಡಿ ಕಾಲೋನಿ ಪ್ರದರ್ಶನಗೊಳ್ಳಲಿದೆ.

ಇದರೊಂದಿಗೆ ಎ.10ರಂದು ಅಮೋಘ ಹಿರಿಯಡ್ಕ ಅಭಿನಯದ ನಾಟಕ ರೈಲುಭೂತ, ಎ.11ರಂದು ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಪ್ರಸ್ತುತಿಯ ನಾಟಕ ದ್ಯಾಟ್ಸ್ ಅಲ್ ಯುವರ್ ಆನರ್ ನಾಟಕಗಳು ಪ್ರದರ್ಶನಗೊಳ್ಳಲಿದೆ. ಎ.13ರಂದು ತಲ್ಲೂರು ಫ್ಯಾಮಿಲಿ ಟ್ರಸ್ಟ್ ಮತ್ತು ಕರ್ನಾಟಕ ಜನಪದ ಪರಿಷತ್ತಿನ ಸಹಯೋಗದಲ್ಲಿ ಜನಪದ ವೈವಿದ್ಯ ಜರಗಲಿದೆ.

ಈ ಎಲ್ಲಾ ನಾಟಕ ಮತ್ತು ಜನಪದ ವೈವಿಧ್ಯಕ್ಕೆ ಪ್ರವೇಶ ಉಚಿತವಾಗಿದ್ದು, ಪ್ರತಿದಿನ ಸಂಜೆ 6:45ಕ್ಕೆ ನಾಟಕ ಪ್ರದರ್ಶನ ಪ್ರಾರಂಭಗೊಳ್ಳಲಿದೆ ಎಂದು ಭೂಮಿಕಾ ಹಾರಾಡಿ ಪ್ರಕಟನೆಯಲ್ಲಿ ತಿಳಿಸಿದೆ.