ಸಾಂದರ್ಭಿಕ ಚಿತ್ರ

ಡೈಲಿ ವಾರ್ತೆ:05 ಏಪ್ರಿಲ್ 2023

ದಕ್ಷಿಣಕನ್ನಡ: ಕೋಳಿ ಪದಾರ್ಥದ ವಿಷಯದಲ್ಲಿ ಜಗಳ; ಮಗನನ್ನು ಬಡಿಗೆಯಿಂದ ಹೊಡೆದು ಕೊಂದ ತಂದೆ

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಕೋಳಿ ಪದಾರ್ಥದ ವಿಷಯದಲ್ಲಿ ಜಗಳವಾಗಿ ತಂದೆ ಮಗನನ್ನು ಬಡಿಗೆಯಿಂದ ಹೊಡೆದು ಕೊಂದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಏರಣಗುಡ್ಡೆ ಬಳಿ ಈ ಘಟನೆ ನಡೆದಿದೆ. ಮೊಗ್ರ ಏರಣಗುಡ್ಡೆಯ ಮಾತೃ ಮಜಲು ನಿವಾಸಿ ಶೀನ ಎಂಬಾತನೇ ತನ್ನ ಮಗ ಶಿವರಾಮ (32) ನನ್ನು ಬಡಿಗೆಯಿಂದ ಬಡಿದು ಕೊಂದವನು. ಅವರಿಬ್ಬರ ನಡುವೆ ಕೋಳಿ ಪದಾರ್ಥಕ್ಕೆ ಸಂಬಂಧಿಸಿ ಆರಂಭವಾದ ಜಗಳ ಕೊನೆಗೆ ಮಾತಿಗೆ ಮಾತು ಬೆಳೆದು ತಂದೆಯಿಂದ ಮಗನ ಹತ್ಯೆ ನಡೆದಿದೆ.

ಈ ಜಗಳ ನಡೆದಿದ್ದು ಮಂಗಳವಾರ ರಾತ್ರಿ ಸುಮಾರು 12 ಗಂಟೆ ವೇಳೆಗೆ. ಶೀನ ಅವರ ಮನೆಯಲ್ಲಿ ಮಂಗಳವಾರ ಕೋಳಿ ಪದಾರ್ಥ ಮಾಡಿದ್ದರು. ಆದರೆ, ರಾತ್ರಿ ಶಿವರಾಮ ಮನೆಗೆ ಬರುವ ಹೊತ್ತಿಗೆ ಕೋಳಿ ಪದಾರ್ಥ ಖಾಲಿ ಆಗಿತ್ತೆನ್ನಲಾಗಿದೆ. ಇದನ್ನು ಆಕ್ಷೇಪಿಸಿ ಶಿವರಾಮ ಮಾತನಾಡತೊಡಗಿದ.

ಕೋಳಿ ಪದಾರ್ಥ ಖಾಲಿಯಾಗಿದ್ದು ಯಾಕೆ ಎನ್ನುವ ವಿಚಾರದಲ್ಲಿ ತಂದೆ ಸಾಕಷ್ಟು ವಿಚಾರಗಳನ್ನು ಹೇಳಿದರೂ ಮಗ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗಿ ತಂದೆ ಶೀನ ಮತ್ತು ಮಗ ಶಿವರಾಮನ ನಡುವೆ ಜಗಳ ಆರಂಭವಾಯಿತು. ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ಶೀನ ಬಡಿಗೆಯಿಂದ ಮಗನ ತಲೆಗೆ ಹೊಡೆದರೆನ್ನಲಾಗಿದೆ.

ಏಟು ಬಲವಾಗಿ ಬಿದ್ದು ತಲೆಯ ಬುರುಡೆ ಒಡೆದಿದ್ದು, ಇದರಿಂದ ಶಿವರಾಮ ಸ್ಥಳದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾಗಿ ಹೇಳಲಾಗಿದೆ. ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿ ಶೀನನನ್ನು ಬಂಧಿಸಿದ್ದಾರೆ. ಶಿವರಾಮನ ಮೃತ ದೇಹ ಕಡಬ ಆಸ್ಪತ್ರೆಯಲ್ಲಿ ಇಡಲಾಗಿದೆ.