ಡೈಲಿ ವಾರ್ತೆ:05 ಏಪ್ರಿಲ್ 2023

ಕೇರಳ:ರೈಲಿನಲ್ಲಿ ಮೂವರು ಸಹ ಪ್ರಯಾಣಿಕರಿಗೆ ಬೆಂಕಿ ಹಚ್ಚಿ ಸಜೀವವಾಗಿ ದಹಿಸಿದ್ದ ವ್ಯಕ್ತಿಯ ಬಂಧನ!

ಕೋಯಿಕ್ಕೋಡ್: ಕೇರಳದ ಕೋಯಿಕೋಡ್ ಜಿಲ್ಲೆಯಲ್ಲಿ ಎಕ್ಸ್‌ಪ್ರೆಸ್ ರೈಲಿಗೆ ಬೆಂಕಿ ಹಚ್ಚಿ ಮೂವರು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಬುಧವಾರ ಶಂಕಿತನನ್ನು ಬಂಧಿಸಿದೆ ಎಂದು ಎಟಿಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದು ಕೇಂದ್ರ ಗುಪ್ತಚರ ಮತ್ತು ಭಯೋತ್ಪಾದನಾ ನಿಗ್ರಹ ದಳದ ಸಿಬ್ಬಂದಿಗಳ ಜಂಟಿ ಕಾರ್ಯಾಚರಣೆಯಾಗಿದ್ದು, ಶಂಕಿತನನ್ನು ಮಹಾರಾಷ್ಟ್ರದ ರತ್ನಗಿರಿ ಬಳಿ ಆರೋಪಿ ಶಾರುಖ್ ಸೈಫಿಯನ್ನು ಬಂದಿಸಲಾಗಿದೆ ಎಂದು ತಿಳಿದುಬಂದಿದೆ.

ದಾಳಿಯ ಹಿಂದಿನ ಉದ್ದೇಶವು ಇನ್ನೂ ಸ್ಪಷ್ಟವಾಗಿಲ್ಲ, ಆದರೆ
ಕೋಯಿಕ್ಕೋಡ್ ಜಿಲ್ಲೆಯ ಎಲತ್ತೂರ್ ಬಳಿ ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದ ವಾದದ ನಂತರ ಪ್ರಯಾಣಿಕರಿಗೆ ಬೆಂಕಿ ಹಚ್ಚಿರುವುದಾಗಿ ಶಂಕಿತನು ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಭಾನುವಾರ ರಾತ್ರಿ 9:30ರ ಸುಮಾರಿಗೆ ರೈಲಿನ ಡಿ1 ಕಂಪಾರ್ಟ್‌ಮೆಂಟ್‌ನೊಳಗೆ ಪ್ರಯಾಣಿಕರೊಬ್ಬರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಇದರಿಂದ ಪ್ರಯಾಣಿಕರು ಭಯಭೀತರಾಗಿದ್ದರು. ಬೆಂಕಿ ಬಹುಬೇಗನೆ ಆಸನಗಳು ಮತ್ತು ಲಗೇಜ್‌ಗಳಿಗೆ ಹರಡಿತು, ಕೋಚ್‌ಗೆ ಬೆಂಕಿ ಆವರಿಸಿತ್ತು. ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರಿಗೆ ಸುಟ್ಟ ಗಾಯಗಳಾಗಿವೆ.

ಆರೋಪಿಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಂಗಳವಾರ ಕಣ್ಣೂರು ನಿಲ್ದಾಣದಲ್ಲಿ ರೈಲು ಕೋಚ್‌ಗಳನ್ನು ಪರೀಕ್ಷಿಸಿ ವಿಧಿವಿಜ್ಞಾನ ಸಾಕ್ಷ್ಯಗಳನ್ನು ಸಂಗ್ರಹಿಸಿದೆ.
ಪ್ರಕರಣದ ತನಿಖೆಗಾಗಿ ಕೇರಳ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದರು. ಆರೋಪಿಯು ಸಹ ಪ್ರಯಾಣಿಕರಿಗೆ ಬೆಂಕಿ ಹಚ್ಚಿ ಅಲ್ಲಿಂದ ತಪ್ಪಿಸಿಕೊಂಡಿದ್ದ. ಈತನ ಪತ್ತೆಗೆ ವಿಶೇಷ ತನಿಖಾ ದಳ ತನ್ನ ಹುಡುಕಾಟವನ್ನು ತೀವ್ರಗೊಳಿಸಿತ್ತು.

ಆರೋಪಿ ಶಾರುಖ್‌ ಸೈಫಿ ನೊಯ್ಡಾ ಮೂಲದವನಾಗಿದ್ದು, ಮಂಗಳವಾರ ಆತ ರತ್ನಗಿರಿಯಲ್ಲಿದ್ದಾನೆಂಬ ಲೊಕೇಷನ್ ಪತ್ತೆಯಾಗಿತ್ತು. ರೈಲಿಗೆ ಬೆಂಕಿ ಹಚ್ಚಿ ಅಲ್ಲಿಂದ ಕೆಳಗೆ ಜಿಗಿಯುವಾಗ ಆತನ ತಲೆಗೆ ಗಾಯಾಗಿತ್ತು. ಅದಕ್ಕೆ ಚಿಕಿತ್ಸೆ ಪಡೆಯಲು ಆತ ರತ್ನಾಗಿರಿ ಜಿಲ್ಲಾಸ್ಪತ್ರೆಗೆ ತೆರಳಿದ್ದ. ಆದರೆ, ಅಲ್ಲಿ ಪೂರ್ತಿ ಚಿಕಿತ್ಸೆಯನ್ನು ಪಡೆದುಕೊಳ್ಳದೇ ಪರಾರಿಯಾಗಿದ್ದ. ಬಳಿಕ ರತ್ನಾಗಿರಿಯಲ್ಲಿ ಆತನಿಗಾಗಿ ತೀವ್ರ ಶೋಧ ನಡೆಸಲಾಯಿತು ಕೊನೆಗೆ ಆತ ರೈಲ್ವೆ ನಿಲ್ದಾಣದಲ್ಲಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಸದ್ಯಕ್ಕೆ ರತ್ನಾಗಿರಿ ಆರ್‌ಪಿಎಫ್ ವಶದಲ್ಲಿರುವ ಆತನನ್ನು ಕೇರಳ ಪೊಲೀಸರು ಶೀಘ್ರವೇ ತಮ್ಮ ವಶಕ್ಕೆ ಪಡೆದುಕೊಳ್ಳಲಿದ್ದಾರೆ.