ಡೈಲಿ ವಾರ್ತೆ:05 ಏಪ್ರಿಲ್ 2023

ಇದ್ರೀಸ್ ಪಾಷಾ ಹತ್ಯೆ ಪ್ರಕರಣದ ಆರೋಪಿ: ಪುನೀತ್ ಕೆರೆಹಳ್ಳಿ ಸೇರಿ ಐವರ ಬಂಧನ!

ಕನಕಪುರ: ಸಾತನೂರು ಸಮೀಪ ಗೋ ಸಾಗಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಇದ್ರೀಸ್ ಪಾಷಾ ಎಂಬವರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುನೀತ್ ಕೆರೆಹಳ್ಳಿ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದೊಂದು ವಾರದಿಂದ ತಲೆಮರೆಸಿಕೊಂಡಿದ್ದ ಪುನೀತ್ ಕೆರೆಹಳ್ಳಿ ಸೇರಿದಂತೆ ಒಟ್ಟು ಐವರನ್ನು ಸಾತನೂರು ಠಾಣೆ ಪೊಲೀಸರು ಬುಧವಾರ ರಾಜಸ್ಥಾನದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲ್ಲೂಕಿನ ಸಾತನೂರು ಬಳಿ ಶುಕ್ರವಾರ ಮಧ್ಯರಾತ್ರಿ ವಾಹನದಲ್ಲಿ ಜಾನುವಾರು ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ ಮಂಡ್ಯ ಮೂಲದ ಇದ್ರೀಸ್ ಪಾಷಾ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಕುಟುಂಬ ಆರೋಪಿಸಿದೆ.

ಕಳೆದೊಂದು ವಾರದಿಂದ ತಲೆಮರೆಸಿಕೊಂಡಿದ್ದ ಪುನೀತ್ ‌ಕೆರೆಹಳ್ಳಿ ಸೇರಿದಂತೆ ಒಟ್ಟು ಐವರರನ್ನು ಸಾತನೂರು ಠಾಣೆ ಪೊಲೀಸರನ್ನೊಳಗೊಂಡ ರಾಮನಗರ ಪೊಲೀಸರ ವಿಶೇಷ ತಂಡಗಳು ಇಂದು ರಾಜಸ್ಥಾನದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿವೆ.

ಕಳೆದ ಮಾ.31ರ ಮಧ್ಯರಾತ್ರಿ ಸಾತನೂರು ಪೊಲೀಸ್ ಠಾಣೆ ಮುಂಭಾಗ ಜಾನುವಾರುಗಳನ್ನು ತುಂಬಿದ್ದ ಕ್ಯಾಂಟರ್‌ ವಾಹನವನ್ನು ಅಡ್ಡಗಟ್ಟಿದ್ದ ರಾಷ್ಟ್ರ ರಕ್ಷಣಾ ಪಡೆ ಸಂಘಟನೆಯ ಮುಖಂಡ ಪುನೀತ್‌ ಕೆರೆಹಳ್ಳಿ, ಇತರೆ ನಾಲ್ವರು ಆರೋಪಿಗಳೊಂದಿಗೆ ತಲೆಮರೆಸಿಕೊಂಡಿದ್ದ. ಏ.2 ರಾತ್ರಿ ವಿಡಿಯೊವೊಂದನ್ನು ಹರಿಬಿಟ್ಟಿದ್ದ ಪುನೀತ್‌, ‘ನಾನೇ ವಿಚಾರಣೆಗೆ ಹಾಜರಾಗುತ್ತೇನೆ’ ಎಂದು ಹೇಳಿಕೊಂಡು ನಾಪತ್ತೆ ಆಗಿದ್ದ ಆರೋಪಿಯನ್ನು ಬಂಧಿಸುವಲ್ಲಿ‌ ತಂಡಗಳು ಯಶಸ್ವಿಯಾಗಿವೆ.

ಇದ್ರೀಷ್ ಪಾಷ ಸಾವಿಗೆ ನಿಖರ ಕಾರಣ ಏನೆಂಬುದು ಮರಣೋತ್ತರ ಪರೀಕ್ಷೆ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ ಎಸ್‌ ಎಲ್) ವರದಿ ಬಂದ ಬಳಿಕವಷ್ಟೇ ತಿಳಿಯಲಿದೆ. ಕನಕಪುರದ ವೈದ್ಯರ ತಂಡವು ಇದ್ರೀಷ್ ಅವರ ಮರಣೋತ್ತರ ಪರೀಕ್ಷೆ ನಡೆಸಿದೆ. ಎಫ್‌ ಎಸ್‌ ಎಲ್‌ ವರದಿಯನ್ನೂ ಪಡೆಯಲಾಗುತ್ತದೆ.

ಮೂರು ಎಫ್‌ಐಆರ್‌: ಪ್ರಕರಣ ಸಂಬಂಧ ಸಾತನೂರು ಠಾಣೆಯಲ್ಲಿ ಮೂರು ಎಫ್‌ ಐಆರ್‌ ಗಳು ದಾಖಲಾಗಿವೆ. ಮೊದಲಿಗೆ ಅಕ್ರಮ ಗೋವು ಸಾಗಣೆಗೆ ಸಂಬಂಧಿಸಿದಂತೆ ಪುನೀತ್‌ ಕೆರೆಹಳ್ಳಿ ದೂರು ನೀಡಿದ್ದ. ಗೋವು ಸಂರಕ್ಷಣೆ ನೆಪದಲ್ಲಿ ನಮ್ಮ ಮೇಲೆ ದಾಳಿ ಮಾಡಿದ್ದಾರೆ ಎಂದು ಕ್ಯಾಂಟರ್‌ ಚಾಲಕ ಪ್ರತಿ ದೂರು ನೀಡಿದ್ದರು. ಮರು ದಿನ ಬೆಳಿಗ್ಗೆ 8ರ ಸುಮಾರಿಗೆ ಘಟನೆ ನಡೆದ ಸ್ಥಳದ 100 ಮೀಟರ್‌ ದೂರದಲ್ಲಿ ಇದ್ರೀಷ್‌ ಅವರ ಶವ ಪತ್ತೆ ಆಗಿದ್ದು, ಅವರ ಸಹೋದರ ಯೂನುಸ್‌ ಪಾಷ ನೀಡಿದ ದೂರಿನ ಅನ್ವಯ ಮತ್ತೊಂದು ಎಫ್‌ ಐಆರ್‌ ದಾಖಲಿಸಿದ್ದೇವೆ ಎಂದು ಎಸ್ ಪಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.