ಡೈಲಿ ವಾರ್ತೆ:06 ಏಪ್ರಿಲ್ 2023
ಉಡುಪಿ ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಫೋಟ: ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಕೃಷ್ಣಮೂರ್ತಿ ಆಚಾರ್ಯ ರಾಜೀನಾಮೆ – ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ
ಉಡುಪಿ: ಉಡುಪಿ ವಿಧಾನಸಭೆ ಕ್ಷೇತ್ರದ ಟಿಕೆಟ್ ಇವತ್ತು ಘೋಷಣೆಯಾಗಿದ್ದು, ಮೀನುಗಾರ ಸಮುದಾಯದ ಯುವ ಮುಖಂಡ, ಉದ್ಯಮಿ ಪ್ರಸಾದ್ ಕಾಂಚನ್ ಅವರಿಗೆ ಟಿಕೆಟ್ ನೀಡಲಾಗಿದೆ.
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ಎಂಟು ಮಂದಿ ಆಕಾಂಕ್ಷಿಗಳಿದ್ದರು. ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು, ಬ್ಲಾಕ್ ಅಧ್ಯಕ್ಷ ರಮೇಶ್ ಕಾಂಚನ್ ,ಮುಖಂಡ ಅಮೃತ್ ಶಣೈ, ಕೃಷ್ಣಮೂರ್ತಿ ಆಚಾರ್ಯ ಸಹಿತ ಎಂಟು ಮಂದಿ ಆಕಾಂಕ್ಷಿಗಳ ಪೈಕಿ ಉಡುಪಿಯ ಟಿಕೆಟ್ ಕೊನೆಗೂ ಯುವ ಉದ್ಯಮಿ ಪ್ರಸಾದ್ ಕಾಂಚನ್ ಪಾಲಾಗಿದೆ.
ಇದರಿಂದಾಗಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಲ್ಲಿ ಅಸಮಾಧಾನ ಸ್ಫೋಟವಾಗಿದ್ದು ಪ್ರಬಲ ಆಕಾಂಕ್ಷಿ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ ಇಂದು ಪ್ರತ್ಯೇಕ ಸಭೆ ನಡೆಸಿ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಅಭಿಮಾನಿಗಳ ಸಭೆಯಲ್ಲಿ ಘೋಷಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಆಚಾರ್ಯ ಗುರುವಾರ ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದು ವೈಯಕ್ತಿಕ ಕಾರಣಗಳಿಂದ ನನ್ನ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.
ಮಥುರಾ ಛತ್ರದಲ್ಲಿ ನಡೆದ ಅಭಿಮಾನಿಗಳ ಸಭೆಯಲ್ಲಿ ಮೊನ್ನೆ ಬಂದವರಿಗೆ ಟಿಕೆಟ್ ನೀಡಿ ನನಗೆ ಅನ್ಯಾಯ ಮಾಡಲಾಗಿದೆ. ಅಭಿಮಾನಿಗಳ ಸಹಕಾರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಸಭೆಯಲ್ಲಿ ನೂರಾರು ಮಂದಿ ಅಭಿಮಾನಿಗಳು ಹಾಜರಿದ್ದರು.