ಡೈಲಿ ವಾರ್ತೆ:09 ಏಪ್ರಿಲ್ 2023

ಸಾಲಿಗ್ರಾಮ‌ದಲ್ಲಿ ಕ್ರಿಕೆಟ್ ಬೆಟ್ಟಿಂಗ್: ಕೋಟ ಪೊಲೀಸರ ದಾಳಿ – 5 ಮಂದಿಯ ಬಂಧನ, 32 ಲಕ್ಷ ರೂ. ಮೌಲ್ಯದ ಸ್ವತ್ತು ವಶಕ್ಕೆ

ಕೋಟ: ಉಡುಪಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಆನ್ ಲೈನ್ ಕ್ರಿಕೆಟ್ ಬೆಟ್ಟಿಂಗ್ ಜೂಜಾಟದ ಬಗ್ಗೆ ಸಾರ್ವಜನಿಕರ ದೂರುಗಳಿದ್ದು ಏ. 8 ರಂದು ಕೋಟ ಠಾಣೆ ವ್ಯಾಪ್ತಿಯ ಸಾಲಿಗ್ರಾಮ ಚಿತ್ರಪಾಡಿ‌ ಬಳಿ ಕ್ರಿಕೆಟ್ ಬೆಟ್ಟಿಂಗ್ (ಜೂಜಾಟ) ನಡೆಸುತ್ತಿದ್ದ ಸ್ಥಳಕ್ಕೆ ಕೋಟ ಪೊಲೀಸರು ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆದು ದೂರು ದಾಖಲಿಸಿಕೊಂಡಿರುವ‌ ಘಟನೆ‌ ನಡೆದಿದೆ.

ಆರೋಪಿಗಳಾದ ಕುಂದಾಪುರ ತಾಲ್ಲೂಕಿನ ಸಿದ್ದಾಪುರದ ತೇಜಸ್,‌ ಮರವಂತೆಯ ಕರ್ತವ್ಯ ಶೆಟ್ಟಿ, ನಾಡ ಗುಡ್ಡೆಯಂಗಡಿಯ ಸುದರ್ಶನ ಶೆಟ್ಟಿ, ಪವನ್ ಶೆಟ್ಟಿ ಗುಡ್ಡೆ ಅಂಗಡಿ, ಮತ್ತು ಪವನ್ ಕುಮಾರ್ ಶೆಟ್ಟಿ ಗುಡ್ಡೆ ಅಂಗಡಿ ಇವರನ್ನು ಬಂದಿಸಲಾಗಿದೆ.

ಇವರು ಚಿತ್ರಪಾಡಿ ಗ್ರಾಮದ ಸಾಲಿಗ್ರಾಮ ಸರ್ವಿಸ್ ರಸ್ತೆ ಬದಿಯಲ್ಲಿ ಎರಡು ಕಾರು ಸುತ್ತ ನಾಲ್ಕೈದು ಜನರು ಸುತ್ತುವರಿದು ಮೊಬೈಲ್ ನಲ್ಲಿ ಕ್ರಿಕೆಟ್ ಬೆಟ್ಟಿಂಗ್ (ಜೂಜಾಟ) ನಡೆಸಿ‌ ಸಾರ್ವಜನಿಕರಿಂದ ಹಣ ವಸೂಲಿ‌ ಮಾಡುತ್ತಿದ್ದರು.

ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಕ್ಷಯ್ ಎಂ. ಹಾಕೆ ಐ ಪಿ ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್ ಟಿ ಸಿದ್ದಲಿಂಗಪ್ಪರವರ ಮಾರ್ಗದರ್ಶನದಂತೆ ಪಿ ಕೆ ದಿನಕರ್ ಪೊಲೀಸ್ ಉಪಾಧಿಕ್ಷಕರು ಉಡುಪಿ ಉಪ ವಿಭಾಗ ರವರ ನಿರ್ದೇಶನದಂತೆ ಬ್ರಹ್ಮಾವರ ವೃತ್ತ ನಿರೀಕ್ಷಕರಾದ ದಿವಾಕರ್ ಪಿ ಎಂ. ಹಾಗೂ ಕೋಟ ಠಾಣಾಧಿಕಾರಿ ಮಧು ಬಿ. ಇ, ಬ್ರಹ್ಮಾವರ ಠಾಣಾಧಿಕಾರಿ ಮಹಾಂತೇಶ್ ಉದಯ ನಾಯ್ಕ್ ಮತ್ತು ಸಿಬ್ಬಂದಿಯವರಾದ ಮೋಹನ್ ಕೊತ್ವಲ್, ಪ್ರದೀಪ್ ನಾಯಕ್, ಸಂತೋಷ್ ರಾಠೋಡ್
ತಂಡ ಜೂಜಾಟ ನಡೆಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆದು 30 ಲಕ್ಷ ಮೌಲ್ಯದ ಎರಡು ಕಾರು, 10 ಮೊಬೈಲ್ ಮತ್ತು ರೂ. 26,000 ನಗದು ಸಹಿತ ಒಟ್ಟು 32,10,000 ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.‌
ಅಲ್ಲದೆ ಈ ಪ್ರಕರಣದಿಂದ ತಲೆಮರಸಿಕೊಂಡಿರುವ ಇಬ್ಬರು ಆರೋಪಿಗಳಾದ ನಿತೀಶ್ ಕುಂದಾಪುರ ಹಾಗೂ ರಾಘವೇಂದ್ರ ಕೂರಡಿ ಇವರ ಪತ್ತೆಗೆ ಬಲೆ ಬೀಸಿದ್ದು ತನಿಖೆ ಮುಂದುವರಿದಿದೆ.