ಡೈಲಿ ವಾರ್ತೆ:15 ಏಪ್ರಿಲ್ 2023
ಕ್ರಿಕೆಟ್ ಮೈದಾನದಲ್ಲೇ ಕೂತು ಸೆಕೆಂಡ್ ಲೆಕ್ಕದಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದ ಬೃಹತ್ ಜಾಲ ಪತ್ತೆ:ನಾಲ್ವರ ಬಂಧನ
ಬೆಂಗಳೂರು: ಕ್ರಿಕೆಟ್ ಪಂದ್ಯಕ್ಕೂ ನೇರ ಪ್ರಸಾರಕ್ಕೂ ಇರುವ ಅಂತರವನ್ನೇ ಬಂಡವಾಳ ಮಾಡಿಕೊಂಡು ಮೈದಾನದಲ್ಲೇ ಕೂತು ಸೆಕೆಂಡ್ ಲೆಕ್ಕದಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದ ಬೃಹತ್ ಜಾಲ ಪೊಲೀಸರು ಪತ್ತೆ ಹಚ್ಚಿ ನಾಲ್ವರನ್ನು ಬಂಧಿಸಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಅನುಮಾನಾಸ್ಪದವಾಗಿ ಓಡಾಡುವಾಗ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ಆರೋಪಿಗಳ ಮೊಬೈಲ್ ಪರಿಶೀಲಿಸಿದಾಗ ಕ್ರಿಕೆಟ್ ಬೆಟ್ಟಿಂಗ್ ಗಳು ಪತ್ತೆಯಾಗಿದ್ದವು. ಬಳಿಕ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಬೆಟ್ಟಿಂಗ್ ದಂಧೆ ಬಯಲಿಗೆ ಬಂದಿದೆ.
ಬಂಧಿತ ಆರೋಪಿಗಳನ್ನು ಹರಿಯಾಣ ಮೂಲದ ವಿಕ್ರಾಂತ್, ಅಮರ್ ಜೋತ್ ಸಿಂಗ್, ಮನೋಜ್ ಭಾತ್ರಾ, ದುಶ್ಯಂತ್ ಕುಮಾರ್ ಸೋನಿ ಎನ್ನಲಾಗಿದೆ. ದೇಶದಲ್ಲಿ ಎಲ್ಲೇ ಮ್ಯಾಚ್ ನಡೆಯುತ್ತಿದ್ದರು ಈ ಗ್ಯಾಂಗ್ ಕ್ರೀಡಾಂಗಣಕ್ಕೆ ಎಂಟ್ರಿ ಕೊಡುತ್ತಿದ್ದರು. ಮೈದಾನದಲ್ಲೇ ಕೂತು ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು. ಒಂದು ಬ್ಯಾಚ್ ಮೈದಾನದಲ್ಲಿ, ಇನ್ನೊಂದು ಬ್ಯಾಚ್ ಹೊರಗಡೆ ಕೂತು ಬೆಟ್ಟಿಂಗ್ ನಡೆಸುತ್ತಿದ್ದರು. ಕ್ರಿಕೆಟ್ ಮ್ಯಾಚ್ ಗೂ ಟಿವಿ ಪ್ರಸಾರಕ್ಕೂ 10 ಸೆಕೆಂಡ್ ಅಂತರವನ್ನು ಬಂಡವಾಳವನ್ನಾಗಿಸಿ ಬೆಟ್ಟಿಂಗ್ ನಡೆಸುತ್ತಿದ್ದರು. ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.