ಡೈಲಿ ವಾರ್ತೆ:16 ಏಪ್ರಿಲ್ 2023

ವಡ್ಡರ್ಸೆ ಕಾನೂನು ಸೇವೆಗಳ ಮಾಹಿತಿ ಶಿಬಿರ, ವಸ್ತು ಪ್ರದರ್ಶನ: ಇಂದು ಮನುಷ್ಯನ ದಾಹ ಹೆಚ್ಚಾಗಿ ಅವಿದ್ಯಾವಂತರಿಗಿಂತ ವಿದ್ಯಾವಂತರೇ ಮೋಸಗಾರರಾಗುತ್ತಿದ್ದಾರೆ: ನ್ಯಾಯಮೂರ್ತಿ ಬಿ.ವೀರಪ್ಪ

ಕೋಟ:ಇಂದು ಮನುಷ್ಯನ ದಾಹ ಹೆಚ್ಚಾಗಿದೆ, ಅವಿದ್ಯಾವಂತರಿಗಿಂತ ವಿದ್ಯಾವಂತರೇ ಮೋಸಗಾರರಾಗುತ್ತಿದ್ದಾರೆ. ಸೋಧರತ್ವ ಭಾವನೆ ದೂರವಾಗಿದೆ. ಅವರಿಗೆ ಕಾನೂನಿನ ಅರಿವು ಇಲ್ಲ. ಭ್ರಷ್ಟಾಚಾರ ಮುಕ್ತವನ್ನಾಗಿಸಲು ಸಂಕಲ್ಪ ಮಾಡಬೇಕು ಎಂದು
ರಾಜ್ಯ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಬಿ.ವೀರಪ್ಪ ಹೇಳಿದರು. ಅವರು ಎ. 16 ರಂದು ಭಾನುವಾರ ಕೋಟ ವಡ್ಡರ್ಸೆ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆದ ಬೆಂಗಳೂರಿನ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬ್ರಹ್ಮಾವರ ಮತ್ತು ಕುಂದಾಪುರ ತಾಲ್ಲೂಕು ಆಡಳಿತ,  ಯಡ್ತಾಡಿ, ಪಾಂಡೇಶ್ವರ ವಲಯ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ಬನ್ನಾಡಿ ವಡ್ಡರ್ಸೆ ಲಯನ್ಸ್ ಕ್ಲಬ್  ಮತ್ತು ಕುಂದಾಪುರ ವಕೀಲರ ಸಂಘದ ಆಶ್ರಯದಲ್ಲಿ ನಡೆದ ಕಾನೂನು ಸೇವೆಗಳ ಮಾಹಿತಿ ಶಿಬಿರ ಮತ್ತು ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಪಂಚಭೂತಗಳು ಸರಿಯಾಗಿ ಕೆಲಸ ಮಾಡುತ್ತಿದ್ದರೂ, ಮಾನವನಾದ ನಾವುಗಳು ಪ್ರಕೃತಿಯನ್ನು ಹಾಳು ಮಾಡುತ್ತಿದ್ದೇವೆ. ಮೃಗೀಯ ಕಾರ್ಯಗಳ ನಿವಾರಣೆಗೆ ಪ್ರತಿಯೊಬ್ಬರಿಗೂ ಕಾನೂನಿನ ಅರಿವು ನೀಡುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ  ಪ್ರತಿಯೊಂದು ಹಳ್ಳಿಯಲ್ಲೂ ವಕೀಲರು ಪ್ರತಿ ತಿಂಗಳು ಕಾನೂನಿನ ಅರಿವನ್ನು ನೀಡುವ ಕೆಲಸ ಮಾಡುವಂತಾಗಬೇಕು ಎಂದರು
ರಾಜ್ಯದಲ್ಲಿ 1 ಕೋಟಿಗೂ ಅಧಿಕ ಪ್ರರಣಗಳು ಕಾನೂನು ಸೇವೆಗಳ ಪ್ರಾಧಿಕಾರದ ಲೋಕ್‌ ಅದಾಲತ್‌ ಮೂಲಕ ಇತ್ಯರ್ಥವಾಗಿರುವುದು ರಾಷ್ಟ್ರದಲ್ಲೇ ಪ್ರಥಮವಾಗಿ ದಾಖಲೆಯಾಗಿದೆ. ಲೋಕ್‌ ಅದಾಲತ್‌ ಮೂಲಕ ರಾಜಿಯಾಗುವ ಪ್ರಕರಣಗಳಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿರದ ಕಾರಣ, ಬಡವರು, ಧೀನ ದುರ್ಬಲರು, ಕಾಮಿರ್ಕರು, ಅಶಕ್ತರಿಗೆ ವರದಾನವಾಗಿ ನ್ಯಾಯ ಒದಗಿಸುವ ಕಾರ್ಯ ನಡೆದಿದೆ ಎಂದರು.
ಈಗ ನಾವು ಪ್ರಭುಗಳು ಚುನಾವಣೆ ಅನಂತರ ನಾವು ಗುಲಾಮರು. ಈ ರೀತಿ ಆಗುವುದಕ್ಕೆ ಚುನಾವಣೆಯಲ್ಲಿ ನಮ್ಮ ಮತಗಳನ್ನು ಮಾರಾಟ ಮಾಡಿಕೊಳ್ಳುತ್ತಿರುವುದು ಕಾರಣವಾಗಿದೆ. ಹೀಗಾಗಿ ಪ್ರಜ್ಞೆಯಿಂದ ಉತ್ತಮ ಅಭ್ಯರ್ಥಿಗಳಿಗೆ ಮತಚಲಾಯಿಸಿ ಎಂದು ರಾಜ್ಯ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಬಿ. ವೀರಪ್ಪ ಕರೆ ನೀಡಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀ‌ರ ಶಿವಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯ ಉಚ್ಚನ್ಯಾಯಾಲಯದ  ನ್ಯಾಯಮೂರ್ತಿ ವೆಂಕಟೇಶ್ ನಾಯ್ಕ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಯಶಂಕರ್, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ
ಅಬ್ದುಲ್ ರಹೀಮ್ ಹುಸೇನ್‌ ಶೇಖ್‌, ಕುಂದಾಪುರ ವಕೀಲರ ಸಂಘದ ಕಾರ್ಯದರ್ಶಿ ಜೆ.ಶ್ರೀನಾಥ್ ರಾವ್, ವಡ್ಡರ್ಸೆ ಮಹಾಲಿಂಗೇಶ್ವರ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಕೊತ್ತಾಡಿ ಉದಯ ಕುಮಾರ್ ಶೆಟ್ಟಿ, ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕಿ ಸುಲೋಚನ ಇದ್ದರು.

ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಸಿವಿಲ್ ನ್ಯಾಯಾಧೀಶೆ ಶರ್ಮಿಳಾ ಸ್ವಾಗತಿಸಿದರು. ವಕೀಲ ರಾಘವೇಂದ್ರಚರಣ್ ನಾವಡ ಕಾರ್ಯಕ್ರಮ ನಿರೂಪಿಸಿದರು.
 ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಾಥ್ ವಂದಿಸಿದರು.