ಡೈಲಿ ವಾರ್ತೆ:25 ಏಪ್ರಿಲ್ 2023

ಮುಂಬಯಿ- ಮಂಗಳೂರು ರೈಲಿನಲ್ಲಿ ಊರಿಗೆ ಮರಳುತ್ತಿದ್ದ ವ್ಯಕ್ತಿ ರೈಲಿನ ಶೌಚಾಲಯದಲ್ಲೇ ಹೃದಯಾಘಾತದಿಂದ ಮೃತ್ಯು: 24 ಗಂಟೆ ರೈಲಿನಲ್ಲೇ ಬಾಕಿಯಾದ ಮೃತದೇಹ!

ಮಂಗಳೂರು: ಮುಂಬಯಿ- ಮಂಗಳೂರು ರೈಲಿನಲ್ಲಿ ಊರಿಗೆ ಮರಳುತ್ತಿದ್ದ ವ್ಯಕ್ತಿ ರೈಲಿನ ಶೌಚಾಲಯದಲ್ಲೇ ಮೃತಪಟ್ಟು ರೈಲಿನ ಸಿಬಂದಿಯ ಗಮನಕ್ಕೇ ಬಾರದೆ ಮೃತದೇಹವು ಮತ್ತೆ ಅದೇ ರೈಲಿನಲ್ಲಿ ಮುಂಬಯಿಗೆ ಹೋದ ಹೃದಯ ಕಲಕುವ ವಿದ್ಯಮಾನ ಘಟಿಸಿದೆ.

ಇಲ್ಲಿನ ಕಿನ್ನಿಗೋಳಿಯ ಮೆನ್ನ ಬೆಟ್ಟಿ ನವರಾದ ಮೋಹನ್‌ ಬಂಗೇರ (56) ಅವರು ಮುಂಬಯಿಯಿಂದ ಊರಿಗೆ ಮರಳುವ ವೇಳೆಗೆ ಹೃದಯಾಘಾತದಿಂದ ಮೃತಪಟ್ಟಿದ್ದು ವಿಷಯ ಗೊತ್ತಾಗದೆ ಅವರ ಕುಟುಂಬಿಕರು ಮುಂಬಯಿ ವರೆಗೂ ಹುಡುಕಾಡಿದ್ದಾರೆ. ಆದರೆ ಅವರಿದ್ದ ಬೋಗಿಯ ಶೌಚಾಲಯ ಸಹಿತ ತಪಾಸಣೆ  ಮಾಡಬೇಕಿದ್ದ ರೈಲು ಸಿಬಂದಿ ಕರ್ತವ್ಯಲೋಪ ಮಾಡಿದ್ದಲ್ಲದೆ ತಾವು ತಪಾಸಣೆ ಮಾಡಿದ್ದಾಗಿ ವರದಿ ಕೊಟ್ಟಿರುವುದು ನೋವು ತಂದಿದೆ.

ಕೊಳೆತ ಶರೀರ ಮೃತದೇಹವನ್ನು ರೈಲಿನಲ್ಲೇ ಮತ್ತೆ ಹಿಂದೆ ಕಳುಹಿಸಲು, ಮರಣೋತ್ತರ ಪರೀಕ್ಷೆಗೆ 10 ಸಾವಿರ ರೂ.ಗಳನ್ನು ಪಾವತಿಸಿದ್ದು ಏಜೆನ್ಸಿಯೊಂದು ಪ್ಯಾಕ್‌ ಮಾಡಿ ಕಳಿಸಿದೆ. ಆದರೆ ಪಾರ್ಸೆಲ್‌ ಇಲ್ಲಿಗೆ ಬರುವಾಗ ದೇಹ ಪೂರ್ಣ ಕೊಳೆತು ದುರ್ವಾಸನೆ ಬೀರುತ್ತಿತ್ತು.

ಎಸಿ ಬೋಗಿಯಲ್ಲಿ ಸಂಚರಿಸುವವರಿಗೇ ಇಂತಹ ದುಃಸ್ಥಿತಿಯಾದರೆ ಹೇಗೆ? ಇಂತಹ ಸ್ಥಿತಿ ಯಾರಿಗೂ ಬರದಿರಲಿ. ರೈಲು ಸಿಬಂದಿ ಇಷ್ಟು ನಿರ್ಲಕ್ಷé ವಹಿಸಿದ್ದರಿಂದ ಹೀಗಾಗಿದೆ. ಇದಕ್ಕಾಗಿ ಪರಿಹಾರಕ್ಕೂ ಆಗ್ರಹಿಸಿ ದೂರು ಸಲ್ಲಿಸಿದ್ದೇವೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮೋಹನ್‌ ಬಂಗೇರ ಹಲವು ವರ್ಷ ಗಳಿಂದ ಮುಂಬಯಿನಲ್ಲಿ ಮಿಲ್ಕ್ ಪಾರ್ಲರ್‌ ನಡೆಸುತ್ತಿದ್ದರು. ಪತ್ನಿ ಹಾಗೂ ಇಬ್ಬರು ಪುತ್ರರು ಕಿನ್ನಿಗೋಳಿಯ ಮನೆಯಲ್ಲಿದ್ದಾರೆ.


ಘಟನೆ ವಿವರ:
ಮುಂಬಯಿಯಿಂದ ಮೋಹನ್‌ ಬಂಗೇರ ಅವರು ಎ. 18ರ ಮುಂಬಯಿ ಸಿಎಸ್‌ಟಿ ಮಂಗಳೂರು ಜಂಕ್ಷನ್‌ ರೈಲಿನ ಬಿ-3 ಕೋಚ್‌ನಲ್ಲಿ ಪ್ರಯಾಣ ಆರಂಭಿಸಿದ್ದರು. ಅವರನ್ನು ಕರೆದೊಯ್ಯಲು ಸೋದರ ಹಾಗೂ ಇತರರು ಸುರತ್ಕಲ್‌ನಲ್ಲಿ ಕಾಯುತ್ತಿದ್ದರು. ಆಗ ಮೋಹನ್‌ ಬಂಗೇರ ಅವರು ರೈಲಿನಲ್ಲಿ ನಾಪತ್ತೆಯಾದ ವಿಚಾರ ಅವರಿಗೆ ರೈಲಿನ ಟಿಟಿಇ ಮೂಲಕ ಫೋನ್‌ನಲ್ಲಿ ಲಭಿಸಿತು. ಅವರ ಬ್ಯಾಗ್‌, ಪರ್ಸ್‌ ಮತ್ತು ಮೊಬೈಲ್‌ ಕುಳಿತಿದ್ದ ಜಾಗದಲ್ಲೇ ಇತ್ತು.

ಟಿಟಿಇಯಲ್ಲಿ ಈ ಕುರಿತು ಮಾತನಾಡಿದಾಗ, ಅವರು ಮೋಹನ್‌ ಬಂಗೇರರು ಕಂಕಾವಲಿ ಅಥವಾ ಮಡಗಾಂವ್‌ನಲ್ಲಿ ಇಳಿದು ಹೋದಂತಿದೆ, ಅಲ್ಲಿಯ ಸಿಸಿಟಿವಿ ಫೂಟೇಜ್‌ ನೋಡಿದರೆ ಗೊತ್ತಾಗಬಹುದು ಎಂದಿದ್ದರು. ಬಳಿಕ ಮೋಹನ್‌ ಕುಟುಂಬದವರು ಮಂಗಳೂರು ಜಂಕ್ಷನ್‌ಗೆ ತೆರಳಿ ಅಲ್ಲಿನ ಅಧಿಕಾರಿಗಳ ಸಲಹೆಯಂತೆ ರೈಲ್ವೇ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು.

ಈ ನಡುವೆ ಮುಂಬಯಿಯಲ್ಲಿರುವ ಸಂಬಂಧಿಕರೂ ಹಲವು ಸ್ಟೇಷನ್‌ಗಳಲ್ಲಿ ಸಿಸಿಟವಿ ದೃಶ್ಯಾವಳಿ ಪರಿಶೀಲನೆ ನಡೆಸಿದರೂ ಎಲ್ಲೂ ಪತ್ತೆಯಾಗಲಿಲ್ಲ. ಮರುದಿನ ಮೋಹನ್‌ ಅವರ ಅಣ್ಣ ರಾಮ ಬಂಗೇರ ಅವರಿಗೆ ಮುಂಬಯಿ ಸಿಎಸ್‌ಟಿ ಸ್ಟೇಷನ್‌ನಿಂದ ಟಿಟಿಇ ಕರೆ ಮಾಡಿದ್ದು ಮೃತದೇಹ ರೈಲಿನ ಟಾಯ್ಲೆಟ್‌ನಲ್ಲಿ ಪತ್ತೆಯಾಗಿರುವುದನ್ನು ತಿಳಿಸಿದ್ದ.
ತಮ್ಮನ ಮೃತದೇಹ ಮಂಗಳೂರಿಗೇ ರೈಲಿನ ಶೌಚಾಲಯದಲ್ಲೇ ಬಂದಿತ್ತು. ಆದರೆ ಸಿಬಂದಿ ಸರಿಯಾಗಿ ಹುಡುಕಾಡದೆ ನಿರ್ಲಕ್ಷé ತೋರಿದ್ದರು. ಒಂದು ವೇಳೆ ಅವರು ಜೀವಂತವಿದ್ದ ಸಣ್ಣ ಅವಕಾಶವಿದ್ದರೂ ಇಲ್ಲಿ ಬದುಕಿಸಬಹುದಿತ್ತು, ಆದರೆ ಟಾಯ್ಲೆಟ್‌ ತಪಾಸಣೆ ಮಾಡದೇ ಹೋದ ಕಾರಣ ಮೃತಶರೀರ ಹಾಗೇ ಅದೇ ರೈಲಿನಲ್ಲಿ ಮುಂಬಯಿಗೆ ಮರಳಿದೆ ಎನ್ನುತ್ತಾರೆ ರಾಮಬಂಗೇರ.