ಡೈಲಿ ವಾರ್ತೆ:27 ಏಪ್ರಿಲ್ 2023
ಉಚ್ಛಿಲದಲ್ಲಿ ರಾಹುಲ್ ಗಾಂಧಿ:
ಕಾಂಗ್ರೆಸ್ ಸರ್ಕಾರ ಬಂದ್ರೆ ಮೀನುಗಾರರಿಗೆ ಪ್ರತ್ಯೇಕ ಇಲಾಖೆ, ಮೀನುಗಾರರಿಗೆ ಭರ್ಜರಿ ಕೊಡುಗೆ
ಉಡುಪಿ: ನಾನು ನಿಮ್ಮ ಕುಟುಂಬದ ಸದಸ್ಯ.ನಮ್ಮ ನಡುವೆ ನೇರ ಸಂವಾದ ಯಾವತ್ತೂ ಇರುತ್ತೆ.ಮೀನುಗಾರರ ಹಿತ ಕಾಯುವುದರಲ್ಲಿ ಯಾವುದೇ ರಾಜಿ ಇಲ್ಲ. ನಮ್ಮ ಸರ್ಕಾರ ಬಂದ್ರೆ ಮೀನುಗಾರರಿಗೆ ಪ್ರತ್ಯೇಕ ಇಲಾಖೆ ಭರಪೂರ ಕೊಡುಗೆ ನೀಡಲಾಗುವುದು ಅಂತಾ ಕಾಂಗ್ರೆಸ್ ಅಗ್ರಗಣ್ಯ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಕಾಪು ವಿಧಾನಸಭಾ ಕ್ಷೇತ್ರದ ಉಚ್ಚಿಲ ದಲ್ಲಿ ಆಯೋಜಿಸಲಾಗಿದ್ದ ಮೀನುಗಾರರೊಂದಿಗಿನ ಸಂವಾದ ಕಾರ್ಯಕ್ರಮ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ಭಾಷಣದಲ್ಲಿ ಅವರು ಮಾತನಾಡಿದರು.
ಮೀನುಗಾರರು ಅನೇಕ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಜಿಎಸ್‌ಟಿ ಡೀಸೆಲ್ ಬೆಲೆ ಏರಿಕೆ ಎಲ್ಲಾ ಸಮಸ್ಯೆ ಆಗಿರುವುದು ಅರಿವಿದೆ. ನಮ್ಮ ಸರ್ಕಾರ ಬರುತ್ತಿದ್ದಂತೆ ಖಚಿತ ಯೋಜನೆ ರೂಪಿಸುತ್ತೇವೆ. ನೀವು ಕೂಡ ರೈತರಂತೆ ದುಡಿಯುವವರು.ತಾವು ಸಮುದ್ರದಲ್ಲಿ ಕೃಷಿ ಮಾಡುತ್ತೀರಿ.
ಕೃಷಿ ರೈತರಿಗೆ ಸಿಗುವ ರಕ್ಷಣೆ ಮೀನುಗಾರರಿಗೂ ಸಿಗುತ್ತೆ.
ಹಣವಂತ ಮೀನುಗಾರರ ಜೊತೆ ಬಡ ಮೀನುಗಾರರಿಗೆ ಹೋರಾಟ ಮಾಡಲು ಸಾಧ್ಯವಿಲ್ಲ.ಸಣ್ಣ ಮೀನುಗಾರರು ಸಾಯುತ್ತಿದ್ದರೆ, ದೊಡ್ಡ ಮೀನುಗಾರರು ಹಣ ಮಾಡುತ್ತಿದ್ದಾರೆ.ನಿಮ್ಮ ರಿಸ್ಕ್ ಬಗ್ಗೆ ನಮಗೆ ಗಂಭೀರತೆ ಇದೆ. ಹೀಗಾಗಿ ಈ ಬಾರಿ ನಮ್ಮ ಸರ್ಕಾರ ಬಂದ್ರೆ ಮೀನುಗಾರರಿಗೆ ಹತ್ತು ಲಕ್ಷ ರೂಪಾಯಿ ಜೀವ ವಿಮೆ, ಮೀನುಗಾರ ಮಹಿಳೆಯರಿಗೆ 1 ಲಕ್ಷ ರೂಪಾಯಿ ಬಡ್ಡಿರಹಿತ ಸಾಲ ಮತ್ತು 25 ರೂಪಾಯಿ ಸಬ್ಸಿಡಿಯೊಂದಿಗೆ 500 ಲೀಟರ್ ಡೀಸೆಲ್ ವಿತರಿಸುತ್ತೇವೆ ರಾಹುಲ್ ಗಾಂಧಿ ಹೇಳಿದರು.
ಕಾಂಗ್ರೆಸ್ ಪಕ್ಷ ರಾಜ್ಯದ ಜನತೆಗಾಗಿ ಈಗಾಗಲೇ ನಾಲ್ಕು ಗ್ಯಾರಂಟಿ ಘೋಷಣೆಗಳನ್ನು ಘೋಷಿಸಿದ್ದು, ಅಧಿಕಾರಕ್ಕೆ ಬಂದ ಒಂದೇ ದಿನದಲ್ಲಿ ಸಚಿವ ಸಂಪುಟ ಸಭೆ ನಡೆಸಿ ಗ್ಯಾರಂಟಿ ಕಾರ್ಡ್ ನಲ್ಲಿ ಘೋಷಿಸಿರುವ ನಾಲ್ಕು ಘೋಷಣೆಗಳನ್ನು ಪೂರ್ಣಗೊಳಿಸಲು ನಾವು ಬದ್ಧರಿದ್ದೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರವು ಹಣಬಲ ಮತ್ತು ತೋಳ್ಬಲದ ಮೂಲಕವಾಗಿ ಅಧಿಕಾರಕ್ಕೆ ಬಂದಿದ್ದು ಅದಕ್ಕಾಗಿಯೇ ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದೆ. ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿ, ಅಧಿಕಾರಕ್ಕೆ ಬಂದ ಕೂಡಲೇ ಉತ್ತಮ ಯೋಜನೆಗಳನ್ನು ಜಾರಿಗೆ ತಂದು ಜನರ ಮನಸ್ಸು ಗೆಲ್ಲುವ ಪ್ರಯತ್ನ ನಡೆಸುತ್ತೇವೆ ಎಂದರು.
ರಾಹುಲ್ ಗಾಂಧಿಗೆ ದೊಡ್ಡ ಅಂಜಲ್ ಮೀನು ಗಿಫ್ಟ್: ವೇದಿಕೆಗೆ ಅಂಜಲ್ ಮೀನು ಹೊತ್ತು ಕಟಪಾಡಿಯ ನಿವಾಸಿ ಮಹಿಳೆ ಪ್ರೇಮ ಅವರು ರಾಹುಲ್ ಗಾಂಧಿಗೆ ಉಡುಗೊರೆಯನ್ನಾಗಿ ನೀಡಿದ್ದು ವಿಶೇಷವಾಗಿತ್ತು.
ಮೊಗವೀರ ಸಮುದಾಯದ ಮಹಾಲಕ್ಷ್ಮಿ ಉಚ್ಛಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ರಾಹುಲ್ ಭೇಟಿ ನೀಡಿದ್ರು
ಕಾಪು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಪ್ರಾಸ್ತಾವಿಕವಾಗಿ ಮಾತನಾಡಿದ್ರು.
ಉಡುಪಿ ಕ್ಷೇತ್ರದ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಎಂ., ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಪ್ರತಾಪ್ ಚಂದ್ರ ಶೆಟ್ಟಿ, ಟಿ. ಎನ್. ಪ್ರತಾಪನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಪ್ರಮುಖರಾದ ಎಂ.ಎ. ಗಫೂರ್, ದೇವಿಪ್ರಸಾದ್ ಶೆಟ್ಟಿ, ರಾಜಶೇಖರ ಕೋಟ್ಯಾನ್, ನವೀನ್ ಚಂದ್ರ ಶೆಟ್ಟಿ, ಕಾಪು ದಿವಾಕರ ಶೆಟ್ಟಿ, ಭಾವನಾ, ಗೀತಾ ವಾಗ್ಲೆ, ವೆರೋನಿಕಾ ಕರ್ನೇಲಿಯೋ, ದೀಪಕ್ ಕೋಟ್ಯಾನ್, ಪ್ರಶಾಂತ ಜತ್ತನ್ನ, ಮಂಜುನಾಥ ಸೊಣೇಗಾರ್, ವಿಶ್ವಾಸ್ ಅಮೀನ್, ಸರಳಾ ಕಾಂಚನ್, ಶಿವಾಜಿ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.