ಡೈಲಿ ವಾರ್ತೆ:28 ಏಪ್ರಿಲ್ 2023

ಬೈಕ್ ಹಾಗೂ ಕಾರು ನಡುವೆ ಭೀಕರ ಅಪಘಾತ ಬೈಕ್ ಸವಾರ ಮೃತ್ಯು, ಸಹಸವಾರ ಗಂಭೀರ

ಬಂಟ್ವಾಳ : ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟಿದ್ದು, ಸಹಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ವಗ್ಗ ಸಮೀಪದ ಬಾಂಬಿಲ ಎಂಬಲ್ಲಿ ಎ.28 ರಂದು ಬೆಳಿಗ್ಗೆ ನಡೆದಿದೆ.

ಮೃತ ಯುವಕನನ್ನು ಅಮ್ಮಾಡಿ ನಿವಾಸಿ ಸಂದೀಪ್ ಲೋಬೊ ಎಂದು ಗುರುತಿಸಲಾಗಿದೆ. ಈತನ ಜೊತೆ ಕೆಲಸ ಮಾಡುವ ನೆರೆ ಮನೆಯ ಆಕಾಶ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇವರಿಬ್ಬರು ವೆಲ್ಡಿಂಗ್ ಕೆಲಸ ಮಾಡುವ ಕಾರ್ಮಿಕರಾಗಿದ್ದು, ಬಿ ಸಿ ರೋಡಿನಿಂದ ಪುಂಜಾಲಕಟ್ಟೆ ಕಡೆಗೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಎದುರಿನಿಂದ ಓವರ್ ಟೇಕ್ ಮಾಡಿಕೊಂಡು ಅತೀವೇಗದಿಂದ ಬಂದ ಕಾರು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಘಟನೆಯಲ್ಲಿ ಗಾಯಗೊಂಡಿದ್ದ ಸಂದೀಪ್ ಲೋಬೋ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದು, ಆಕಾಶ್ ಅವರು ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಘಟನಾ ಸ್ಥಳಕ್ಕೆ ಪುಂಜಾಲಕಟ್ಟೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.