ಡೈಲಿ ವಾರ್ತೆ: 02 ಮೇ 2023
ಗೋವಾಕ್ಕೆ ಬಂದಿದ್ದ ಪ್ರವಾಸಿಗರ ಮೇಲೆ ಹಲ್ಲೆ: ಮೂವರು ಆರೋಪಿಗಳ ಬಂಧನ ಪ್ರಕರಣ ದಾಖಲು!
ಪಣಜಿ: ಗೋವಾ ರಾಜ್ಯ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿ ತಾಣವಾಗಿ ಹೆಸರುವಾಸಿಯಾಗಿದೆ. ಪ್ರತಿದಿನ ಗೋವಾಕ್ಕೆ ಭೇಟಿ ನೀಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ.
ಆದರೆ ಗೋವಾ ರಾಜ್ಯದಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಯುತ್ತಿರುವ ಘಟನೆಗಳು ಮರುಕಳಿಸುತ್ತಿದೆ. ಗೋವಾಕ್ಕೆ ಬಂದಿದ್ದ ದೆಹಲಿಯ ಪ್ರವಾಸಿಗರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಪ್ರಕರಣ, ಮಹಾರಾಷ್ಟ್ರದ ಪ್ರವಾಸಿಗರು ತಮ್ಮ ವಾಹನವನ್ನು ಓವರ್ ಟೇಕ್ ಮಾಡಿದ್ದಕ್ಕೆ ಪ್ರವಾಸಿಗರ ಮೇಲೆ ಹಲ್ಲೆ ಪ್ರಕರಣಗಳು ಸೇರಿ ಗೋವಾದಲ್ಲಿ ನಡೆದಿರುವ ಇತರ ಕಹಿ ಘಟನೆಗಳ ನೆನಪು ಮಾಸುವ ಮುನ್ನವೇ ಗೋವಾಕ್ಕೆ ಬಂದಿದ್ದ ಪ್ರವಾಸಿಗರ ಮೇಲೆ ಹಲ್ಲೆ ನಡೆದ ಮತ್ತೊಂದು ಘಟನೆ ವರದಿಯಾಗಿದೆ.
ಗೋವಾದ ಕಲಂಗುಟ್‍ನ ಹೋಟೆಲ್‍ವೊಂದರಲ್ಲಿ ದಾಳಿ ನಡೆಸಿ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿ, ಈ ವೇಳೆ ದಾಳಿಕೋರರು ಪ್ರವಾಸಿಗರ ಮೊಬೈಲ್ ಕಸಿದು ಪರಾರಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಂಗುಟ್ ಪೊಲೀಸರು ಮೂವರು ಶಂಕಿತರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳೆಲ್ಲರೂ ಮೂಲತಃ ಕರ್ನಾಟಕದವರಾಗಿದ್ದು, ಶ್ರೀನಿವಾಸ್ ಲಮಾಣಿ(23), ಶಿವ ಲಮಾಣಿ( 22), ಮತ್ತು ಅಖಿಲೇಶ್ ಚವಾಣ್(19) ಎಂದು ಗುರುತಿಸಲಾಗಿದೆ.
ಕೇರಳದ ಪ್ರವಾಸಿಗರು ಗೋವಾದ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಬಂದಿದ್ದು, ಅವರು ಹೊಟೇಲ್‍ನಲ್ಲಿರುವ ತಮ್ಮ ಕೋಣೆಗೆ ಹೋಗುತ್ತಿದ್ದಾಗ ದರೋಡೆಗೆ ತಯಾರಿ ನಡೆಸುತ್ತಿದ್ದ ಮೂವರು ಶಂಕಿತರು ಓಷಿಯಾನಿಕ್ ಶಾಕ್ ಬರ್ದೇಶ್ ಬಳಿ ಬರುತ್ತಿದ್ದಂತೆ ದೂರುದಾರ ಮತ್ತು ಅವರ ಸ್ನೇಹಿತರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ಪರಿಣಾಮ ಅವರು ಗಾಯಗೊಂಡಿದ್ದಾರೆ.