ಡೈಲಿ ವಾರ್ತೆ:05 ಮೇ 2023

ಕಳೆದ ಬಾರಿಯ ಚುನಾವಣೆಯಲ್ಲಿ ಅಭಿವೃದ್ಧಿಯ ಕೊರತೆಯಿಂದ ಸೋಲಾಗಿಲ್ಲ, ಅಪ ಪ್ರಚಾರದಿಂದ ಸೋಲಾಗಿದೆ; ರಮಾನಾಥ ರೈ.

ಬಂಟ್ವಾಳ : ಕಳೆದ ಬಾರಿಯ ನನ್ನ ಶಾಸಕ ಅವಧಿಯಲ್ಲಿ 5 ಸಾವಿರ ಕೋಟಿಗೂ ಹೆಚ್ಚು ಅಭಿವೃದ್ಧಿ ಕಾರ್ಯಗಳು ಆಗಿದ್ದರೂ ನನಗೆ ಸೋಲಾಗಿದೆ, ಕ್ಷೇತ್ರದ ಅಭಿವೃದ್ದಿಯ ಕೊರತೆಯಿಂದ ಸೋಲಾಗಿಲ್ಲ, ಅಪ ಪ್ರಚಾರದಿಂದ ಸೋಲಾಗಿದೆ ಎಂದು ಮಾಜಿ ಸಚಿವ, ಬಂಟ್ವಾಳ ಕಾಂಗ್ರೆಸ್ ಅಭ್ಯರ್ಥಿ ಬಿ. ರಮಾನಾಥ ರೈ ಹೇಳಿದರು.

ಅವರು ಶುಕ್ರವಾರ ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಏಮಾಜೆ ಹಾಗೂ ನೇರಳಕಟ್ಟೆ ಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಬಿಜೆಪಿ ಸರಕಾರವು ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಇವರ ಅಭಿವೃದ್ಧಿ ಶೂನ್ಯ. ಕೇವಲ ಸುಳ್ಳು, ಅಪ ಪ್ರಚಾರ ಮತ್ತು ಕೋಮು ಭಾವನೆಯನ್ನು ಕೆರಳಿಸುವುದನ್ನೇ ಬಂಡವಾಳ ಮಾಡಿಕೊಂಡು ಚುನಾವಣೆ ಎದುರಿಸಲು ಪ್ರಯತ್ನಿಸುತ್ತಿದ್ದಾರೆ. ಎಂದು ಆರೋಪಿಸಿದ ಅವರು ಆದರೆ ಈ ಬಾರಿ ಜನತೆ ಎಲ್ಲವನ್ನೂ ಅರಿತುಕೊಂಡಿದ್ದಾರೆ. ಈ ಬಾರಿ ಬಿಜೆಪಿಯ ಡಬ್ಬಲ್ ಇಂಜಿನ್ ಸರಕಾರದ ದುರಾಡಳಿತ, ಬೆಲೆ ಏರಿಕೆ, ನಿರುದ್ಯೋಗ, ಅಭದ್ರತೆ, ಅರಾಜಕತೆಯಿಂದ ಜನತೆ ಬೇಸತ್ತು ಕಾಂಗ್ರೆಸ್ ನತ್ತ ಒಲವು ತೋರಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಜನತೆ ನೆಚ್ಚಿಕೊಂಡಿದ್ದು ಇದು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯಧಿಕ ಮತಗಳ ಅಂತರದಿಂದ ಜಯ ದಾಖಲಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ.ಜಾತಿ, ಪ.ಪಂಗಡದ ಅಧ್ಯಕ್ಷ ಜನಾರ್ದನ ಚೆಂಡ್ತಿಮಾರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ವಿ.ಪೂಜಾರಿ, ಜಿಲ್ಲಾ ಕಾಂಗ್ರೆಸ್ ಮಾಜಿ ಕೋಶಾಧಿಕಾರಿ ವಿಜಯ ಕುಮಾರ್ ಸೊರಕೆ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಪ್ರಮುಖರಾದ ಬಿ.ಎಂ.ಅಬ್ಬಾಸ್ ಅಲಿ, ಶ್ರೀಧರ ರೈ ಕುರ್ಲೆತ್ತಿಮಾರು, ದೇರಣ್ಣ ಪೂಜಾರಿ, ಹಮೀದ್ ಕುಕ್ಕರಬೆಟ್ಟು, ನಿರಂಜನ್ ರೈ, ಪ್ರಕಾಶ್ ರೈ, ಅಬ್ಬಾಸ್ ನೇರಳಕಟ್ಟೆ, ಪದ್ಮನಾಭ ಶೆಟ್ಟಿ ಕೊಡಂಗೆಮಾರ್, ರಾಮಚಂದ್ರ ಶೆಟ್ಟಿ, ವಿಜಯ, ಸಮಿತಾ ಡಿ.ಪೂಜಾರಿ, ಪ್ರೇಮ, ಲಕ್ಷ್ಮೀ, ಹಾಜಿ.ಕೆ.ಯೂಸುಫ್ ಕೊಡಾಜೆ, ನೀಲಯ್ಯ ಏಮಾಜೆ, ದರ್ಬಾರ್ ಅಬ್ದುಲ್ ಖಾದರ್, ಅಹ್ಮದ್ ಹಾಜಿ ಕುಕ್ಕರಬೆಟ್ಟು, ನಾರಾಯಣ ಗೌಡ, ಹಮೀದ್ ಪರ್ಲೊಟ್ಟು, ರಶೀದ್ ಪರ್ಲೊಟ್ಟು, ಬಿ.ಕೆ.ಬಂಗೇರ, ಎನ್.ಕೆ. ಅಬೂಬಕ್ಕರ್, ಪಿ.ಕೆ.ಅಬ್ಬಾಸ್ ಪರ್ಲೊಟ್ಟು, ಎನ್.ಕೆ.ಹಂಝ ಮೊದಲಾದವರು ಭಾಗವಹಿಸಿದ್ದರು.