ಡೈಲಿ ವಾರ್ತೆ:09 ಮೇ 2023
ಪೋಕ್ಸೋ ಬಾಲಕನ ಹೆಸರು ಬಹಿರಂಗ: ಹತ್ತು ಮಂದಿ ವರದಿಗಾರರಿಗೆ ಜಾಮೀನು ನಿರಾಕರಣೆ!
ಭಟ್ಕಳ:ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಠಾಣಾ ವ್ಯಾಪ್ತಿಯೊಳಗೆ ಅಪ್ರಪ್ತ ವಯಸ್ಸಿನ ಬಾಲಕನಿಗೆ ಲೈಂಗಿಕ ಪೀಡನೆ ನೀಡಿದ ಪ್ರಕರಣದ ಬಗ್ಗೆ ವರದಿ ಮಾಡುವಾಗ ಬಾಲಕನ ಹೆಸರು ಹಾಗೂ ತಾಯಿಯ ಮತ್ತು ಅಜ್ಜಿಯ ಹೆಸರು ಮತ್ತು ಬಾಲಕ ಯಾರು ಎಂದು ತಿಳಿದುಕೊಳ್ಳಲು ಸಹಕಾರಿಯಾದ ಅಂಶಗಳನ್ನು ಬಹಿರಂಗ ಪಡಿಸಿದ ಪತ್ರಕರ್ತರು ಹಾಗೂ ವರದಿಗಾರರು ಮತ್ತು ಆರೋಪಿಯ ಪತ್ನಿ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮೇ. 6 ರಂದು ಕಾರವಾರ ಜಿಲ್ಲಾ ಸತ್ರ (ಪೋಕ್ಸೋ ವಿಶೇಷ ನ್ಯಾಯಾಲಯ) ತಿರಸ್ಕರಿಸಿದೆ.
ಆರೋಪಿಗಳಾದ ಶ್ರೀನಿವಾಸ ಮಾಸ್ತಪ್ಪ ನಾಯ್ಕ್, ವಿಷ್ಣು ಮಂಜಯ್ಯ ದೇವಾಡಿಗ, ವೆಂಕಟೇಶ್ ಸಂತಮ್ಮ ದೇವಾಡಿಗ, ಸ್ವಾತಿ ಗಣಪತಿ ನಾಯ್ಕ್ W/O ಶೈಲೇಶ್ ದೇವಾಡಿಗ, ಗಣಪತಿ ನಾರಾಯಣ ನಾಯ್ಕ್, ದಿನೇಶ್ ಮಂಜುನಾಥ್ ನಾಯ್ಕ್, ಭವಾನಿ ಶಂಕರ್ ವೆಂಕಟ್ರಮಣ ನಾಯ್ಕ್, ಕುಮಾರ್ ಈರಪ್ಪ ನಾಯ್ಕ್, ಜೀವಾತ್ತಮ್ ವಿಠ್ಠಲ್ ಪೈ, ಅರ್ಜುನ್ ಮಲ್ಯ ಇವರುಗಳ ವಿರುದ್ದ ಭಟ್ಕಳ ಪೊಲೀಸರು ಪೋಕ್ಸೋ ಕಾಯ್ದೆಯ ಕಲಂ 23 ರಂತೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗದ ಕಾರಣ ನ್ಯಾಯಾಲಯವು ಅವರುಗಳ ವಿರುದ್ಧ ಜಾಮೀನುರಹಿತ ವಾರೆಂಟು ಹೊರೆಡಿಸಿತ್ತು. ಆ ಹಿನ್ನಲೆಯಲ್ಲಿ ಆರೋಪಿತರು ನಿರೀಕ್ಷಣಾ ಜಾಮೀನು ಕೋರಿದ್ದರು.
ಕಾನೂನಿನಂತೆ ಹಾಗೂ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ ಪತ್ರಿಕೆಗಳಲ್ಲಿ ನೊಂದ ಬಾಲಕನ ಯಾ ಬಾಲಕಿಯ ಹೆಸರು ಅಥವಾ ಅವರನ್ನು ಪತ್ತೆ ಹಚ್ಚಲು ಅನುಕೂಲವಾದ ವಿವರಗಳನ್ನು ಪ್ರಕಟಿಸುವಂತಿಲ್ಲ.