ಡೈಲಿ ವಾರ್ತೆ: ಫೆ./16/2026

“ಕರ್ನಾಟಕದ ಬಲಿಷ್ಠ ಪುರುಷ – 2026” ಕಿರೀಟ ಕುಂದಾಪುರಕ್ಕೆ: ಡಾ. ಸತೀಶ್ ಖಾರ್ವಿ ದ್ವಿಚಿನ್ನದ ಸಾಧನೆ

ಕುಂದಾಪುರ: ದಕ್ಷಿಣ ಕನ್ನಡ ಜಿಲ್ಲೆಯ ಕೂಳೂರು ಸ್ಪೋರ್ಟ್ಸ್ ಪ್ರಮೋಟರ್ಸ್ ಅವರ ಸಂಯೋಜನೆಯಲ್ಲಿ, ಕರ್ನಾಟಕ ಪವರ್ಲಿಫ್ಟಿಂಗ್ ಅಸೋಸಿಯೇಷನ್ ಹಾಗೂ ದಕ್ಷಿಣ ಕನ್ನಡ ಪವರ್ಲಿಫ್ಟಿಂಗ್ ಅಸೋಸಿಯೇಷನ್ ಅವರ ಸಹಭಾಗಿತ್ವದಲ್ಲಿ ನಡೆದ ಕರ್ನಾಟಕ ರಾಜ್ಯ ಮಾಸ್ಟರ್ಸ್ ಹಾಗೂ ದಕ್ಷಿಣ ಕನ್ನಡ–ಉಡುಪಿ ಜಿಲ್ಲಾ ಮಟ್ಟದ ಪವರ್‌ಲಿಫ್ಟಿಂಗ್ ಸ್ಪರ್ಧಾಕೂಟ–2026 ಫೆಬ್ರವರಿ 14 ಮತ್ತು 15ರಂದು ಭರ್ಜರಿಯಾಗಿ ನಡೆಯಿತು.

ಪುರುಷರು ಮತ್ತು ಮಹಿಳೆಯರಿಗಾಗಿ ಆಯೋಜಿಸಲಾದ ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಕ್ರೀಡಾಪಟುಗಳು ಭಾಗವಹಿಸಿದ್ದರು.

ಈ ಮಹತ್ವದ ಕ್ರೀಡಾಕೂಟದಲ್ಲಿ ಕುಂದಾಪುರದ ಅಂತರಾಷ್ಟ್ರೀಯ ಪವರ್‌ಲಿಫ್ಟರ್ ಡಾ. ಸತೀಶ್ ಖಾರ್ವಿ ಅವರು 66 ಕೆಜಿ M-2 ವಿಭಾಗದಲ್ಲಿ ಕ್ಲಾಸಿಕ್ ಹಾಗೂ Equipped ವಿಭಾಗಗಳಲ್ಲಿ ಸ್ಪರ್ಧಿಸಿ ಎರಡೂ ವಿಭಾಗಗಳಲ್ಲಿ ಚಿನ್ನದ ಪದಕಗಳನ್ನು ಜಯಿಸಿ ಅಪೂರ್ವ ಸಾಧನೆ ಮೆರೆದಿದ್ದಾರೆ. ಜೊತೆಗೆ “ಕರ್ನಾಟಕದ ಬಲಿಷ್ಠ ಪುರುಷ – 2026” ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡು ಕುಂದಾಪುರಕ್ಕೆ ಕೀರ್ತಿ ತಂದಿದ್ದಾರೆ.

ಮಹಿಳಾ ವಿಭಾಗದಲ್ಲಿ ಬೆಂಗಳೂರಿನ ರೆಡ್ ಕೇಜಿ ಜಿಮ್‌ನ ಪ್ರತಿನಿಧಿ ಕ್ರೀಡಾಪಟು “ಕರ್ನಾಟಕದ ಬಲಿಷ್ಠ ಮಹಿಳೆ – 2026” ಪ್ರಶಸ್ತಿಯನ್ನು ಪಡೆದು ಗಮನ ಸೆಳೆದರು.
ಇದಲ್ಲದೆ, ಡಾ. ಸತೀಶ್ ಖಾರ್ವಿ ಅವರ ಕುಂದಾಪುರ ನ್ಯೂ ಹರ್ಕ್ಯುಲೆಸ್ ಜಿಮ್‌ನ ಸದಸ್ಯರಾದ ಕಾರ್ತಿಕ್ ಪೂಜಾರಿ ಅವರು 93 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು, ದಕ್ಷಿಣ ಕನ್ನಡ–ಉಡುಪಿ ಜಿಲ್ಲಾ ಮಟ್ಟದ “ಬಲಿಷ್ಠ ಪುರುಷ – 2026” ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಡಾ. ಸತೀಶ್ ಖಾರ್ವಿ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿರುವ ಕ್ರೀಡಾಪಟುಗಳು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸಾಧನೆ ಮಾಡುತ್ತಿರುವುದು ಕ್ರೀಡಾಂಗಣದಲ್ಲಿ ಗಮನಾರ್ಹ ಬೆಳವಣಿಗೆಯಾಗಿದೆ. ಈ ಸಾಧನೆ ಕುಂದಾಪುರದ ಕ್ರೀಡಾ ಕ್ಷೇತ್ರಕ್ಕೆ ಮತ್ತೊಂದು ಗರ್ವದ ಅಧ್ಯಾಯವನ್ನು ಸೇರಿಸಿದೆ.