

ಡೈಲಿ ವಾರ್ತೆ: ಫೆ./16/2026
ಯಳವತ್ತಿಯಲ್ಲಿ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನ ವೈಭವ

ಲಕ್ಷ್ಮೇಶ್ವರ, ಫೆ.16: ತಾಲೂಕಿನ ಯಳವತ್ತಿ ಗ್ರಾಮದಲ್ಲಿ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನವು ಗ್ರಾಮಸ್ಥರು ಹಾಗೂ ಸಾಹಿತ್ಯಾಸಕ್ತರ ಅಪಾರ ಉತ್ಸಾಹದ ನಡುವೆ ವಿಜೃಂಭಣೆಯಿಂದ ನಡೆಯಿತು.
ಸಾಹಿತ್ಯಾಭಿಮಾನಿಗಳ ಸಕ್ರಿಯ ಭಾಗವಹಿಸುವಿಕೆಯಿಂದ ಕಾರ್ಯಕ್ರಮವು ಸಾಂಸ್ಕೃತಿಕ ಸೊಬಗು ತಳೆದಿತ್ತು. ಸಮ್ಮೇಳನದ ಅಧ್ಯಕ್ಷತೆಯನ್ನು ವಿಶ್ರಾಂತ ಪ್ರಾಚಾರ್ಯರು ಹಾಗೂ ಹಿರಿಯ ಸಾಹಿತಿಗಳಾದ ಪ್ರೊ. ಎಸ್.ಬಿ. ಕರಿಬರಮಗೌಡ ವಹಿಸಿಕೊಂಡರು. ಉದ್ಘಾಟನಾ ನುಡಿಗಳನ್ನು ಹಿರಿಯ ಸಾಹಿತಿ ಸಿ.ಆರ್. ಗೋಕಾವಿ ಅವರು ನೆರವೇರಿಸಿದರು. ಆಶಯ ನುಡಿಗಳನ್ನು ಶ್ರೀಮತಿ ನಿರ್ಮಲಾ ಶೆಟ್ಟರ್ ಮಂಡಿಸಿ, ಕನ್ನಡ ಭಾಷೆ ಮತ್ತು ಸಾಹಿತ್ಯದ ಉಳಿವಿಗೆ ಸಮೂಹ ಪ್ರಯತ್ನ ಅಗತ್ಯವೆಂದು ಅಭಿಪ್ರಾಯಪಟ್ಟರು.

ಕವಿಗೋಷ್ಠಿಯಲ್ಲಿ ಒಟ್ಟು 23 ಕವಿಗಳು ಭಾಗವಹಿಸಿ ತಮ್ಮ ವೈವಿಧ್ಯಮಯ ಕವನಗಳ ಮೂಲಕ ಶ್ರೋತೃಗಳ ಮನಸೂರೆಗೊಂಡರು. ಸಮಕಾಲೀನ ಸಾಮಾಜಿಕ ಸಮಸ್ಯೆಗಳು, ಗ್ರಾಮೀಣ ಬದುಕಿನ ಮೌಲ್ಯಗಳು ಹಾಗೂ ಮಾನವೀಯತೆಯ ಸಂದೇಶಗಳನ್ನು ಕವಿತೆಗಳ ಮೂಲಕ ಪ್ರತಿಪಾದಿಸಲಾಯಿತು.
ವಿಶೇಷ ಆಮಂತ್ರಿತರಾಗಿ ಬಿ.ಸಿ. ಪಟ್ಟೇದ (ಮುಖ್ಯೋಪಾಧ್ಯಾಯರು), ಎಂ.ಬಿ. ಹೊಸಮನಿ (ವಿಶ್ರಾಂತ ಮುಖ್ಯೋಪಾಧ್ಯಾಯರು), ರಮೇಶ್ ನಾಡಿಗೇರ (ಹಿರಿಯ ಪತ್ರಕರ್ತರು), ಯಲ್ಲಪ್ಪ ಪಲ್ಲೇದ (ಸಮಾಜ ಸೇವಕರು), ನಾಗರಾಜ ದೊಡ್ಡಮನಿ, ರಾಮಣ್ಣ ಲಮಾಣಿ (ಸಮಾಜ ಸೇವಕರು), ಡಿ.ಎಚ್. ಪಾಟೀಲ (ಹಿರಿಯ ಶಿಕ್ಷಕರು), ಬಿ.ಎಸ್. ಹರಲಾಪುರ (ಅಧ್ಯಕ್ಷರು), ಚಂದ್ರು ನೇಕಾರ (ಕಾರ್ಯದರ್ಶಿಗಳು, ಕ.ರಾ. ಪ್ರಾಶಾಸಿ ಸಂಘ), ಎಂ.ಎಂ. ಹವಳದ (ವಿಶ್ರಾಂತ ದೈಹಿಕ ಶಿಕ್ಷಣಾಧಿಕಾರಿಗಳು), ಎಂ.ಕೆ. ಕಳ್ಳಿಮಠ, ಶೇಖಣ್ಣ ಸೊರಟೂರ, ಬಸವರಾಜ ಯರಗುಪ್ಪಿ (ಶಿಕ್ಷಕ ಸಾಹಿತಿಗಳು) ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ನಾಗರಾಜ ಕಳಸಾಪುರ, ಉಮೇಶ್ ನೇಕಾರ ಹಾಗೂ ಎಸ್.ಕೆ. ಅಮ್ಮಿನಭಾವಿ ನಡೆಸಿದರು. ಕಾರ್ಯಕ್ರಮದ ವ್ಯವಸ್ಥೆಯನ್ನು ವಿಶಾಲ ಬಟಗುರ್ಕಿ, ಪಾಟೀಲ್ ಫಕ್ಕಿರೇಶ ಮಕರಬ್ಬಿ, ಎಲ್.ಎಸ್. ನಂದೆಣ್ಣವರ ಮತ್ತು ಸಿ.ಎಫ್. ಪಾಟೀಲ್ ಕೈಗೊಂಡಿದ್ದರು. ಸ್ವಾಗತವನ್ನು ಎಸ್.ಪಿ. ಕಟ್ಟೆಣ್ಣವರ ನೆರವೇರಿಸಿದ್ದು, ವಂದನಾರ್ಪಣೆಯನ್ನು ಜಿ.ಎಸ್. ರಾಮಶೆಟ್ರು ಸಲ್ಲಿಸಿದರು.
ಸಮ್ಮೇಳನವು ಕನ್ನಡ ಸಾಹಿತ್ಯದ ವೈಭವವನ್ನು ಮತ್ತೊಮ್ಮೆ ಸ್ಮರಿಸುವಂತಾಗಿ, ಗ್ರಾಮೀಣ ಪ್ರದೇಶಗಳಲ್ಲಿ ಸಾಹಿತ್ಯ ಚಟುವಟಿಕೆಗಳಿಗೆ ಹೊಸ ಚೈತನ್ಯ ತುಂಬಿದ ಕಾರ್ಯಕ್ರಮವೆಂದು ಸಾಹಿತ್ಯಾಸಕ್ತರು ಅಭಿಪ್ರಾಯಪಟ್ಟರು.