ಡೈಲಿ ವಾರ್ತೆ:11 ಮೇ 2023

ಮೂಡುಬಿದಿರೆ: ಕಾಂಗ್ರೆಸ್- ಬಿಜೆಪಿ ಕಾರ್ಯಕರ್ತರ ನಡುವೆ ಸಂಘರ್ಷ, ನಿಷೇಧಾಜ್ಞೆ ಜಾರಿ

ಮಂಗಳೂರು:ಮೂಡುಬಿದಿರೆ ವ್ಯಾಪ್ತಿಯ ಮೂಡುಶೆಡ್ಡೆಯ ಸರಕಾರಿ ಹಿ.ಪ್ರಾ.ಶಾಲೆಯ ಮತಗಟ್ಟೆಯ ಬಳಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಹೊಡೆದಾಟ ನಡೆದಿದ್ದು, ಬಳಿಕ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಕಾರಿಗೆ ಕಲ್ಲೆಸೆದು ಹಾನಿಗೊಳಿಸಲಾಗಿದೆ.

ಬುಧವಾರ ರಾತ್ರಿ ವೇಳೆ ಮೂಡುಬಿದಿರೆ ಕ್ಷೇತ್ರದ ಅಭ್ಯರ್ಥಿ ಮಿಥುನ್ ರೈ ಮೂಡುಶೆಡ್ಡೆಯ ಮತಗಟ್ಟೆಯ ಬಳಿ ತೆರಳಿ ಕಾರ್ಯಕರ್ತರ ಬಳಿ ಮಾತನಾಡುತ್ತಿದ್ದರು ಎನ್ನಲಾಗಿದೆ.

ಈ ವೇಳೆ ಬಿಜೆಪಿಗರು ‘ಮೋದಿ ಮೋದಿ’ ಎಂದು ಘೋಷಣೆ ಕೂಗಿದಾಗ, ಮಿಥುನ್ ರೈ ಮತ್ತವರ ಬೆಂಬಲಿಗರು ‘ಕಾಂಗ್ರೆಸ್‌ಗೆ ಜೈ’ ಘೋಷಣೆ ಕೂಗಿದ್ದಾರೆ. ಬಳಿಕ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದು ಹೊಡೆದಾಟ ಸಂಭವಿಸಿದೆ ಎನ್ನಲಾಗಿದೆ.

ಮೂಡುಶೆಡ್ಡೆಯಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ಘರ್ಷಣೆ ನಡೆದ ಹಿನ್ನೆಲೆಯಲ್ಲಿ ಕಾವೂರು ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಹೊರಗಿನ ವ್ಯಕ್ತಿಗಳಿಗೆ ಮೂಡುಶೆಡ್ಡೆ ವ್ಯಾಪ್ತಿಯೊಳಗೆ ಅವಕಾಶ ನಿರಾಕರಿಸಲಾಗಿದೆ.

ಮೂಡುಶೆಡ್ಡೆಯ ವ್ಯಾಪ್ತಿಯಲ್ಲಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ.ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಡಿಸಿಪಿ ಅಂಶುಕುಮಾರ್‌ರ ವಾಹನಕ್ಕೂ ಕಲ್ಲೆಸೆದ ಪರಿಣಾಮ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.