ಡೈಲಿ ವಾರ್ತೆ:11 ಮೇ 2023

ವರದಿ: ಕುಮಾರಿ ಭೂಮಿಕಾ ವಿ. ಬೆಂಗಳೂರು

ಮೂಕಾಂಬಿಕೆಯ ಸನ್ನಿಧಿಯಲ್ಲಿ‌ ಹಬ್ಬದ ವಾತಾವರಣ ಸೃಷ್ಟಿಸಿದ ಯುವಕರ ಓಕುಳಿ ಆಟ

ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ದಿನಾಂಕ 09-05-2023 ರಂದು ನಡೆದ ರಥೋತ್ಸವದಲ್ಲಿ ರಾಜ್ಯ ಮತ್ತು ಹೊರ ರಾಜ್ಯದಿಂದ ಆಗಮಿಸಿದಂತಹ ಸಹಸ್ರಾರು ಭಕ್ತಾಧಿಗಳು ಪಾಲ್ಗೊಂಡಿದ್ದು, ತದನಂತರದಲ್ಲಿ ನಡೆದಂತಹ ಕಾರ್ಯಕ್ರಮಗಳು ಮತ್ತು ಓಕುಳಿ ಆಟ ನೋಡುಗರನ್ನ ತನ್ನತ್ತ ಕೈ ಬೀಸಿ ಕರೆಯಿತು. ಓಕುಳಿ ಆಟದಲ್ಲಿ‌ ಪಾಲ್ಗೊಂಡಂತಹ ಯುವಕರ‌ ಪೈಪೋಟಿಯಂತೂ ನೋಡುಗರಿಗೆ ಮನರಂಜನೆಯ ಹಬ್ಬದೂಟವನ್ನೇ ಬಡಿಸಿದಂತಿತ್ತು.

ರಥೋತ್ಸವದ ಮಾರನೆಯ ದಿನ ಬೆಳಗ್ಗೆ ಅಧಿವಾಸಹೋಮ ಮತ್ತು ಮಹಾಪೂಜೆಯನ್ನ ನಡೆಸಲಾಯ್ತು. ಇನ್ನೂ ರಾತ್ರಿ ದೇವಸ್ಥಾನದ ಒಳ ಪ್ರಾಕಾರದಲ್ಲಿ ನಡೆದಂತಹ ಓಕುಳಿ ಆಟವೇ ಅಂದಿನ ಪ್ರಮುಖ ಆಕರ್ಷಣೆಯಾಗಿತ್ತು.

ಓಕುಳಿ ಆಟದಲ್ಲಿ ನಾ ಮುಂದು ತಾ ಮುಂದು ಎಂದು ಪಾಲ್ಗೊಂಡಂತಹ ಯುವಕರು ಹಗ್ಗಕ್ಕೆ ಕಟ್ಟಿದಂತಹ ಬಾಳೆಗೊನೆ, ಅಡಿಕೆ ಗೊಂಚಲು ಹಾಗೂ ಇನ್ನಿತರ ತರಕಾರಿ ಹಣ್ಣುಗಳನ್ನ ಕಸಿದುಕೊಳ್ಳಲು ಹರಸಾಹಸ ಪಟ್ಟರು. ಹೀಗೆ ತರಕಾರಿ ಹಣ್ಣುಗಳನ್ನ ಕಸಿದ ತಕ್ಷಣವೇ ಸುತ್ತಲೂ ನೆರೆದಿದ್ದಂತಹ ಜನರು ಅವರಿಗೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ರು. ಜೊತೆಗೆ ಹಗ್ಗಕ್ಕೆ ಕಟ್ಟಿದಂತಹ ತರಕಾರಿ ಮತ್ತು ಹಣ್ಣು ಯಾರ ಪಾಲಾಗುತ್ತದೆಯೋ ಎಂದು ಕುತೂಹಲದಿಂದ ಓಕುಳಿ ಹೊಂಡದ ಸುತ್ತ ಕುಳಿತು ವೀಕ್ಷಿಸಿದ್ರು.

ಇನ್ನೂ ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕೆರಾಡಿ ಚಂದ್ರಶೇಖರ ಶೆಟ್ಟಿ, ರಾಮಚಂದ್ರ ಅಡಿಗರು ಹಾಗೂ ವ್ಯವಸ್ಥಾಪನಾ ಸಮಿತಿಯ ಸರ್ವ ಸದಸ್ಯರೂ ಉಪಸ್ಥಿತರಿದ್ದರು.