ಡೈಲಿ ವಾರ್ತೆ:12 ಮೇ 2023

ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ನಗರಸಭೆ ಸಹಾಯಕ ಎಂಜಿನಿಯರ್!

ಗದಗ:ಬೆಟಗೇರಿ ನಗರಸಭೆ ಸಹಾಯಕ ಎಂಜಿನಿಯರ್ ರಸ್ತೆ ಕಾಮಗಾರಿಯ ಬಿಲ್ ಮಾಡಿಕೊಡಲು 1.50 ಲಕ್ಷ ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ನಡೆದಿದೆ.

ಗದಗ-ಬೆಟಗೇರಿ ನಗರಸಭೆಯ ಸಹಾಯಕ ಎಂಜಿನಿಯರ್ ವೀರೇಂದ್ರ ಸಿಂಗಾ ಕಾಟೇವಾಲ ಅವರು, ಗುತ್ತಿಗೆದಾರ ಅಬ್ದುಲ್ ಮನಿಯಾರ್ ಎಂಬುವರು ರಸ್ತೆ ಕಾಮಗಾರಿ ನಡೆಸಿದ್ದ 9 ಲಕ್ಷ ಬಾಕಿ ಹಣ ಬಿಡುಗಡೆಗಾಗಿ ಮನವಿ ಮಾಡಿದ್ದರು.

ಆದರೆ ಈ ಹಣ ಬಿಡುಗಡೆ ಮಾಡಲು 1.50 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಗುತ್ತಿಗೆದಾರ ಅಬ್ದುಲ್ ಮನಿಯಾರ್ ಈ ಸಂಬಂಧ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಇಂದು ಎಇ ವೀರೇಂದ್ರ ಸಿಂಗ್ ಲಂಚದ ಹಣವನ್ನು ನೀಡುವಂತೆ ಹೇಳಿದ್ದರು. ಅದರಂತೆ ಲಂಚದ ಹಣ 1.50 ಲಕ್ಷ ಪಡೆದು, ಬೈಕ್ ಸೈಡ್ ಬ್ಯಾಗ್ ನಲ್ಲಿ ಇಡುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಈ ಮೂಲಕ ಎಇ ವೀರೇಂದ್ರ ಸಿಂಗಾ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಲೋಕಾಯುಕ್ತ ಎಸ್ಪಿ ಸತೀಶ್, ಡಿವೈಎಸ್ಪಿ ಶಂಕರ್ ಮಾರ್ಗದರ್ಶನದಲ್ಲಿ ಇನ್ಸ್ ಪೆಕ್ಟರ್ ರವಿ ನೇತೃತ್ವದಲ್ಲಿ ತಂಡ ದಾಳಿ ಮಾಡಿತ್ತು. ಆರೋಪಿಯನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.