ಡೈಲಿ ವಾರ್ತೆ:14 ಮೇ 2023
ಭಟ್ಕಳದಲ್ಲಿ ಹಾರಿಸಲಾದ ಧ್ವಜ ಪಾಕಿಸ್ತಾನದ ಧ್ವಜವಲ್ಲ: ಉತ್ತರ ಕನ್ನಡ ಎಸ್‌ಪಿ ಸ್ಪಷ್ಟನೆ
ಭಟ್ಕಳ: ಹೊನ್ನಾವರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ, ಭಟ್ಕಳ ಶಂಶುದ್ದೀನ್ ವೃತ್ತದಲ್ಲಿ ಹಸಿರು, ಕೇಸರಿ ಬಾವುಟ ಹಿಡಿದು ಕಾಂಗ್ರೆಸ್ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ಆದರೆ ಪಾಕಿಸ್ತಾನ ಧ್ವಜ ಹಾರಿಸಿದ್ದಾರೆ, ಮುಸ್ಲಿಂ ಧ್ವಜ ಹಾರಿಸಿದ್ದಾರೆ ಎಂಬ ವಾಟ್ಸಾಪ್ ಬರಹಗಳು ಎಲ್ಲೆಡೆ ಹರಿದಾಡಿದ್ದವು. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್‌ರವರು ಭಟ್ಕಳದಲ್ಲಿ ಹಾರಿಸಲಾದ ಧ್ವಜ ಪಾಕಿಸ್ತಾನದ ಧ್ವಜವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಬೆಂಬಲಿಗರು ಬಳಸಿದ ಧ್ವಜ ಪಾಕಿಸ್ತಾನದ ಧ್ವಜ ಅಲ್ಲ, ವಾಸ್ತವವಾಗಿ ಅಲ್ಲಿದ್ದ ವ್ಯಕ್ತಿಗಳು ತಮ್ಮ ಸ್ವಂತ ವಿವೇಚನೆಯಿಂದ ಧಾರ್ಮಿಕ ಧ್ವಜ ಬಳಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಇದು ಪಾಕಿಸ್ತಾನದ ಧ್ವಜ ಅಲ್ಲ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳು ಈಗಾಗಲೇ ದೃಢಪಡಿಸಿದ್ದರಿಂದ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಅಥವಾ ಕ್ರಮ ಕೈಗೊಂಡಿಲ್ಲ ಎಂದು ಅವರು ಹೇಳಿದ್ದಾರೆ.
“ಸಾಮಾಜಿಕ ಮಾಧ್ಯಮ ಬಳಕೆದಾರರು ವದಂತಿಗಳನ್ನು ಹರಡಬಾರದು ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸೂಕ್ಷ್ಮ ವಿಷಯವನ್ನು ಪೋಸ್ಟ್ ಮಾಡಬಾರದು. ಭಟ್ಕಳದಲ್ಲಿ ಹಾರಿಸಿದ್ದು ಕೇಸರಿ, ಹಸಿರು ಧಾರ್ಮಿಕ ಧ್ವಜವೇ ಹೊರತು ಪಾಕಿಸ್ತಾನದ ಧ್ವಜ ಅಲ್ಲ ಎಂಬುದನ್ನು ನಾವು ದೃಢಪಡಿಸಿದ್ದೇವೆ. ಹಾಗಾಗಿ ಕೋಮು ಗಲಭೆಯನ್ನು ಉಂಟುಮಾಡುವ ಯಾವುದೇ ತಪ್ಪು ಮಾಹಿತಿಗಳನ್ನು ಹಂಚಿಕೊಳ್ಳದಂತೆ ನಾವು ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ವಿನಂತಿಸುತ್ತೇವೆ” ಎಂದು ಅವರು ಹೇಳಿದ್ದಾರೆ.
ಕೆಲವು ಬೆಂಬಲಿಗರು ವಿಜಯೋತ್ಸವ ರ್‍ಯಾಲಿಗೆ ಕೇಸರಿ ಧ್ವಜಗಳನ್ನು ತಂದಿದ್ದರಿಂದ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಐಕ್ಯತೆಯನ್ನು ಬಿಂಬಿಸಲು ಕೆಲವು ಮುಸ್ಲಿಂ ಬೆಂಬಲಿಗರು ಹಸಿರು ಬಾವುಟವನ್ನು ಹಿಡಿದು ರ್‍ಯಾಲಿಗೆ ಸೇರಿದರು. ಅದಕ್ಕೂ ಮುನ್ನ ಅಲ್ಲಿ ಅಂಬೇಡ್ಕರ್ ಭಾವಚಿತ್ರ ಇರುವ ನೀಲಿ ಬಾವುಟಗಳು ಇದ್ದವು. ಇದು ವಾಸ್ತವವಾಗಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವನ್ನು ಖಾತ್ರಿಪಡಿಸುವಲ್ಲಿ ಎಲ್ಲಾ ಸಮುದಾಯಗಳು ಶ್ರಮಿಸಿವೆ ಎಂಬ ಸಂದೇಶ ನೀಡುವುದಕ್ಕಾಗಿ ಆ ರೀತಿ ನಡೆದಿದೆ ಎಂದು ಹೇಳಲಾಗಿದೆ.