ಡೈಲಿ ವಾರ್ತೆ:14 ಮೇ 2023

ನಕಲಿ ಮದ್ಯ ಸೇವಿಸಿ ಮೂವರು ಮೃತ್ಯು – 10ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಚೆನ್ನೈ: ನಕಲಿ ಮದ್ಯ ಸೇವಿಸಿ ಮೂವರು ಮೃತಪಟ್ಟು, 10ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಮಿಳುನಾಡಿನ ಮರಕ್ಕನಂನಲ್ಲಿ ನಡೆದಿರುವುದು ವರದಿಯಾಗಿದೆ.

ನಕಲಿ ಮದ್ಯವನ್ನು ಸೇವಿಸಿ ಸುರೇಶ್, ಶಂಕರ್ ಮತ್ತು ರಾಣಿವೇಲ್ ಎನ್ನುವವರು ಮೃತಪಟ್ಟಿದ್ದು, ಪುದುಚೇರಿಯ ಐಪಿಎಂಇಆರ್ ಆಸ್ಪತ್ರೆಯಲ್ಲಿ ಇತರ 16 ಮಂದಿ ದಾಖಲಾಗಿದ್ದು, ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ಸದ್ಯ ನಕಲಿ ಮದ್ಯದ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಆಡಳಿತ ಪಕ್ಷವನ್ನು ಟೀಕಿಸಿದ್ದಾರೆ. ಇದು ಎಂಕೆ ಸ್ಟಾಲಿನ್ ನೇತೃತ್ವದ ಸರ್ಕಾರದ “ಆಡಳಿತಾತ್ಮಕ ಅಸಮರ್ಥತೆ” ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಎಐಎಡಿಎಂಕೆ ಆಡಳಿತದಲ್ಲಿ ನಕಲಿ ಮದ್ಯ ಮಾರಾಟವನ್ನು ರದ್ದುಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಆದರೆ ಈ ಹಾವಳಿ ಮತ್ತೆ ರಾಜ್ಯದಲ್ಲಿ ಶುರುವಾಗಿದೆ ಎಂದು ಅವರು ಹೇಳಿದ್ದಾರೆ.