ಡೈಲಿ ವಾರ್ತೆ:17 ಮೇ 2023

ಇದ್ರೀಸ್ ಪಾಷಾ ಕೊಲೆ ಪ್ರಕರಣ| ಪುನೀತ್‌ ಕೆರೆಹಳ್ಳಿ ಸೇರಿ ಐವರಿಗೆ ಜಾಮೀನು

ಬೆಂಗಳೂರು: ಇದ್ರೀಸ್ ಪಾಷಾ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಹಿಂದುತ್ವ ಸಂಘಟನೆ ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ ಸೇರಿದಂತೆ ಐವರಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಪ್ರಕರಣದ ಆರೋಪಿಗಳಾದ ಪುನೀತ್ ಕೆರೆಹಳ್ಳಿ, ಗೋಪಿ, ಸುರೇಶ್, ಪವನ್ ಕುಮಾರ್ ಎ.ಎನ್.ಪಿ ಲಿಂಗಪ್ಪ ಎಂಬುವವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.
ಆರೋಪಿಗಳ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರ ನೇತೃತ್ವದ ರಜಾಕಾಲದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
“ಇದ್ರೀಸ್ ಪಾಷಾ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ತನಿಖೆ ಪೂರ್ಣಗೊಂಡಿದ್ದು, ಆರೋಪಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆಯನ್ನೂ ಪೂರ್ಣಗೊಳಿಸಲಾಗಿದೆ. ಇನ್ನು ಚಾರ್ಜ್ ಶೀಟ್ ಸಲ್ಲಿಕೆಯಾಗಿ ವಿಚಾರಣೆ ನಡೆಯಬೇಕಿರುವುದರಿಂದ ಜಾಮೀನು ಮಂಜೂರು ಮಾಡಬೇಕು” ಎಂದು ಅರ್ಜಿದಾರರ ಪರ ವಾದಿಸಿದ ವಕೀಲರು ಮನವಿ ಮಾಡಿದರು. ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಪೀಠ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ.

ರಾಮನಗರ ಜಿಲ್ಲೆಯ ಕನಕಪುರದ ಸಾತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಏಪ್ರಿಲ್ 1 ರ ಮುಂಜಾನೆ ಜಾನುವಾರು ಸಾಗಾಟ ವಾಹನದ ಸಹಾಯಕ ಚಾಲಕ ಮಂಡ್ಯದ ಗುತ್ತಲು ನಿವಾಸಿ ಇದ್ರೀಸ್ ಪಾಷಾ ಎಂಬುವವರನ್ನು ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಪುನೀತ್ ಕೆರೆಹಳ್ಳಿ ಮತ್ತು ಇತರ ನಾಲ್ವರ ವಿರುದ್ಧ ಸಾತನೂರು ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 341, 504, 506, 324, 302, 34ರ ಅಡಿ ಪ್ರಕರಣ ದಾಖಲಾಗಿತ್ತು.