ಡೈಲಿ ವಾರ್ತೆ:17 ಮೇ 2023

ಸಿದ್ದರಾಮಯ್ಯ ವಿರುದ್ಧ ಖರ್ಗೆಗೆ ದೂರು ನೀಡಿದ ಡಿಕೆಶಿ.!

ಬೆಂಗಳೂರು: 2006ರಿಂದ ಇದುವರೆಗೆ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಲ್ಲಿ ಎಸಗಿದ ಪ್ರಮಾದಗಳ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ದೂರು ನೀಡಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ದೂರು ಕೊಟ್ಟಿರುವ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ವಿರುದ್ಧ ದೋಷಾರೋಪ ಪಟ್ಟಿಯ ಮಾದರಿಯಲ್ಲಿ ಆರೋಪಗಳನ್ನು ಪಟ್ಟಿ ಮಾಡಿದ್ದಾರೆ.
2 ಸಲ ವಿಪಕ್ಷ ನಾಯಕ ಸ್ಥಾನ, 5 ವರ್ಷ ಮುಖ್ಯಮಂತ್ರಿ ಹುದ್ದೆಯ ಅಧಿಕಾರ ಅನುಭವಿಸಿದ್ದಾರೆ. ವಿರೋಧ ಪಕ್ಷದ ನಾಯಕನ ಸ್ಥಾನ ಪಡೆಯಲು ಸಿದ್ದರಾಮಯ್ಯ ಪಕ್ಷವನ್ನೇ ಬ್ಲ್ಯಾಕ್‌ಮೇಲ್ ಮಾಡಿದರು. ಬೆಂಬಲಿಗೆ ಶಾಸಕರನ್ನು ಕರೆದುಕೊಂಡು ಗೋವಾ ರೆಸಾರ್ಟ್‌ಗೆ ತೆರಳಿದ್ದ ಸಿದ್ದರಾಮಯ್ಯ ನಾಯಕರಿಗೆ ಬ್ಲ್ಯಾಕ್‌ಮೇಲ್ ಮಾಡುವ ಮೂಲಕ ವಿಪಕ್ಷ ನಾಯಕನ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇದಾದ ನಂತರ 5 ವರ್ಷ ಸಿಎಂ ಹುದ್ದೆಯ ಅಧಿಕಾರ ಅನುಭವಿಸಿದ್ದಾರೆ. ನಾನು ದಶಕಗಳ ಕಾಲ ಪಕ್ಷ ಸಂಘಟನೆಗೆ ದುಡಿದಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿದ್ದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇವೆ. ಹಾಗಾಗಿ ಸಿದ್ದರಾಮಯ್ಯ ಅವರನ್ನು ಎರಡನೇ ಬಾರಿ ಮುಖ್ಯಮಂತ್ರಿ ಮಾಡುವ ಬದಲಾಗಿ ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಡಿ.ಕೆ ಶಿವಕುಮಾರ್ ಎಐಸಿಸಿ ಅಧ್ಯಕ್ಷರ ಬಳಿ ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿ ಇದೆ.