ಡೈಲಿ ವಾರ್ತೆ: 17 ಮೇ 2023

ಆರ್ ಟಿಐ ಕಾರ್ಯಕರ್ತ ಓಂಕಾರ್ ಎಸ್ ವಿ ತಾಳಗುಪ್ಪರಿಗೆ ಜೀವ ಬೆದರಿಕೆ ಒಡ್ಡಿದ ಆರೋಪ: ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ವಿರುದ್ಧ ಎಫ್‌ಐಆರ್‌

ಶಿವಮೊಗ್ಗ: ಮಾಹಿತಿ ಹಕ್ಕು ಕಾರ್ಯಕರ್ತನಿಗೆ ಜೀವ ಬೆದರಿಕೆ ಒಡ್ಡಿದ ಆರೋಪದ ಹಿನ್ನೆಲೆ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಲಾಗಿತ್ತು. ಈಗ ನ್ಯಾಯಾಲಯದ ಸೂಚನೆ ಮೇರೆಗೆ ಸಾಗರ ಪೊಲೀಸ್‌ ಠಾಣೆಯಲ್ಲಿ ಸಿ.ಎಸ್.ಷಡಾಕ್ಷರಿ ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ತಾಳಗುಪ್ಪದ ಓಂಕಾರ.ಎಸ್‌.ಪಿ ಅವರು ಸಿ.ಎಸ್.ಷಡಾಕ್ಷರಿ ಅವರ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ಜನವರಿ 12ರಂದು ಸಾಗರದ ಗಾಂಧಿ ಮೈದಾನದಲ್ಲಿ ಸರ್ಕಾರಿ ನೌಕರರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಿ.ಎಸ್.ಷಡಾಕ್ಷರಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಷಡಾಕ್ಷರಿ ಅವರು, ಓಂಕಾರ.ಎಸ್‌.ಪಿ ಅವರನ್ನು ಗುರಿಯಾಗಿಸಿಕೊಂಡು ಬೆದರಿಕೆ ಒಡ್ಡುವಂತೆ ಮಾತನಾಡಿದ್ದಾರೆ. ಪ್ರಾಣ ಬೆದರಿಕೆಯನ್ನೂ ಒಡ್ಡಿದ್ದಾರೆ ಎಂದು ಆರೋಪಿಸಿ ಖಾಸಗಿ ದೂರು ದಾಖಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯ ಎಫ್‌ಐಆರ್‌ ದಾಖಲಿಸುವಂತೆ ಸಾಗರ ಠಾಣೆಗೆ ಸೂಚಿಸಿದೆ. ಅದರಂತೆ ಸಾಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.