ಡೈಲಿ ವಾರ್ತೆ: 19 ಮೇ 2023

ಮೇ 20 ರಂದು 28 ಶಾಸಕರು ಸಚಿವರಾಗಿ ಪದಗ್ರಹಣ ಸಾಧ್ಯತೆ: ಯಾರಿಗೆ ಒಲಿಯಲಿದೆ ಮಂತ್ರಿಗಿರಿ ಇಲ್ಲಿದೆ ಡಿಟೇಲ್ಸ್ ?

ಬೆಂಗಳೂರು: ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ, ಡಿ.ಕೆ.ಶಿವಕುಮಾರ್‌ ಅವರನ್ನು ಉಪಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಹೈಕಮಾಂಡ್ ಘೋಷಣೆ ಮಾಡಿದ್ದು, ನಾಳೆ (ಮೇ 20) ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಪದಗ್ರಹಣ ಸಮಾರಂಭ ನಡೆಯಲಿದೆ.

ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಜೊತೆಗೆ ಕೆಲವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹೀಗಾಗಿ ಸಿಎಂ ಆಯ್ಕೆ ಸರ್ಕಸ್ ಬಳಿಕ ಕೈ ಪಾಳಯದಲ್ಲಿ ಸಚಿವ ಸಂಪುಟ ಕಸರತ್ತು ಶುರುವಾಗಿದ್ದು, ಹಲವು ಶಾಸಕರು ಇದೀಗ ನೂತನ ಸಚಿವ ಸಂಪುಟ ಸೇರುವ ಆಶಯ ವ್ಯಕ್ತಪಡಿಸಿದ್ದಾರೆ. ಕೆಲವರು ತಮ್ಮ ಜಿಲ್ಲೆಗೆ ಹೆಚ್ಚು ಸಚಿವ ಸ್ಥಾನ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.

ನಾಳೆ ಮಧ್ಯಾಹ್ನ 12.30ಕ್ಕೆ ಕಂಠೀರವ ಸ್ಟೇಡಿಯಂನಲ್ಲಿ ಮುಖ್ಯಮಂತ್ರಿ 2ನೇ ಬಾರಿಗೆ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದೇ ವೇಳೆ 28 ಶಾಸಕರು ಸಚಿವರಾಗಿ ಪದಗ್ರಹಣ ಸಾಧ್ಯತೆ ಇದೆ. ಆದ್ರೆ ಎಷ್ಟು ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎನ್ನುವುದನ್ನು ಕೈ ನಾಯಕರು ಗುಟ್ಟಾಗಿ ಇಟ್ಟಿದ್ದಾರೆ.

28 ಸಚಿವ ಸ್ಥಾನಕ್ಕೆ ಕಾಂಗ್ರೆಸ್ನಲ್ಲಿ 80ಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳಿದ್ದಾರೆ. ಸಂಭಾವ್ಯ ಸಚಿವರ ಪಟ್ಟಿಯನ್ನ ಕಾಂಗ್ರೆಸ್ನ ರಾಜ್ಯ ಉಸ್ತುವಾರಿ ಸುರ್ಜೇವಾಲ ಹಾಗೂ ವೇಣುಗೋಪಾಲ್ ಫೈನಲ್ ಮಾಡಿದ್ದಾರೆ. ಸಿದ್ದರಾಮಯ್ಯ ಕೋಟಾದಲ್ಲಿ 10 ಮಂದಿ, ಡಿಕೆ ಶಿವಕುಮಾರ್ ಕೋಟಾದಲ್ಲಿ 10 ಮಂದಿ, ಉಳಿದ ಸ್ಥಾನಗಳನ್ನು ಹೈಕಮಾಂಡ್ ಕೋಟಾದಲ್ಲಿ ಹಂಚಿಕೆಯಾಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಸಂಭಾವ್ಯ ಸಚಿವರ ಪಟ್ಟಿ ಈ ಕೆಳಗಿನಂತಿದೆ:
‘ಕೈ’ ಸಂಭಾವ್ಯ ಸಚಿವರ ಪಟ್ಟಿ
ಬೆಂಗಳೂರು ಬಿಟ್ಟರೆ ಅತಿ ಹೆಚ್ಚು ವಿಧಾನಸಭೆ ಕ್ಷೇತ್ರಗಳನ್ನು ಬೆಳಗಾವಿ ಜಿಲ್ಲೆ ಹೊಂದಿದೆ. ಈ ಬಾರಿ ಕಾಂಗ್ರೆಸ್ ಒಟ್ಟು ಜಿಲ್ಲೆಯ 18 ಕ್ಷೇತ್ರಗಳ ಪೈಕಿ 11ರಲ್ಲಿ ಗೆದ್ದು ಬೀಗಿದೆ. ಹೀಗಾಗಿ ಈ ಸಲ ಬೆಳಗಾವಿ ಜಿಲ್ಲೆಗೆ ಮೂರು ಸಚಿವ ಸ್ಥಾನಗಳನ್ನು ನೀಡಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಪ್ರಮುಖವಾಗಿ ಆ ಮೂವರು ಯಾರು ಅಂದರೆ ಬಿಜೆಪಿ ತೊರೆದು ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆದ್ದಿರುವ ಲಕ್ಷ್ಮಣ ಸವದಿ, ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಸತತ ಎರಡನೇ ಬಾರಿ ಗೆದ್ದಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಮಹಿಳಾ ಕೋಟಾದಲ್ಲಿ ಸಚಿವ ಸ್ಥಾನ ಲಭಿಸುವ ಸಾಧ್ಯತೆಗಳು ಹೆಚ್ಚಿವೆ. ಇನ್ನು ಕಾಂಗ್ರೆಸ್ ಹಿರಿಯ ನಾಯಕ, ಕೆಪಿಸಿಸಿ ಕಾರ್ಯಧ್ಯಕ್ಷ ಬೆಳಗಾವಿಯಲ್ಲಿ ಹಿಡಿತ ಸಾಧಿಸಿರುವ ಸತೀಶ್ ಜಾರಕಿಹೊಳಿ ಅವರಿಗೂ ಪ್ರಮುಖ ಖಾತೆ ಸಿಗುವುದು ಖಚಿತವಾಗಿದೆ.

ಇನ್ನು ಬೆಂಗಳೂರು ನಗರ ಜಿಲ್ಲೆಯಲ್ಲಿ ಕೆ.ಜೆ. ಜಾರ್ಜ್, ರಾಮಲಿಂಗಾರೆಡ್ಡಿ, ಹ್ಯಾರಿಸ್, ದಿನೇಶ್ ಗುಂಡೂರಾವ್, ಜಮೀರ್ ಅಹಮ್ಮದ್ ಖಾನ್ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿವೆ. ಇನ್ನುಳಿದಂತೆ ಆರ್.ಬಿ.ತಿಮ್ಮಾಪುರ್, ಎಂ.ಬಿ. ಪಾಟೀಲ್, ಕೆ.ಎಚ್. ಮುನಿಯಪ್ಪ, ಪ್ರಿಯಾಂಕ್ ಖರ್ಗೆ, ಅಜಯ್ ಸಿಂಗ್, ಈಶ್ವರ್ ಖಂಡ್ರೆ. ಹೆಚ್.ಕೆ.ಪಾಟೀಲ್, ಭೀಮಣ್ಣ ನಾಯಕ, ಎಸ್ಎಸ್ ಮಲ್ಲಿಕಾರ್ಜುನ, ರುದ್ರಪ್ಪ ಲಮಾಣಿ, ನಾಗೇಂದ್ರ, ಮಧು ಬಂಗಾರಪ್ಪ, ಯು.ಟಿ. ಖಾದರ್, ಬಿ.ಕೆ. ಹರಿಪ್ರಸಾದ್, ಸಲೀಂ ಅಹಮದ್ ಸೇರಿ ಪ್ರಮುಖರ ಹೆಸರು ಪಟ್ಟಿಯಲ್ಲಿದೆ ಎಂದು ಹೇಳಲಾಗಿದೆ.


ಒಟ್ಟಿನಲ್ಲಿ ಕೈ ಪಾಳಯದಲ್ಲಿ ಸಚಿವ ಸ್ಥಾನಕ್ಕೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ. ಆದ್ರೆ ಯಾರಿಗೆ ಅದೃಷ್ಟ ಒಲಿಯಲಿದೆ ಎಂದು ಕಾದು ನೋಡಬೇಕಿದೆ.

– Advertisement –