ಡೈಲಿ ವಾರ್ತೆ: 26 ಮೇ 2023

ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದಿಂದ ಹರಪನಹಳ್ಳಿಯ ನೂತನ ಶಾಸಕಿ ಎಂ.ಪಿ ಲತಾ ಮಲ್ಲಿಕಾರ್ಜುನವರಿಗೆ ಸತ್ಕಾರ

ಹರಪನಹಳ್ಳಿ: ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಪ್ರಥಮ ಮಹಿಳಾ ಶಾಸಕಿಯಾಗಿ ಪ್ರಚಂಡ ಗೆಲುವು ಸಾಧಿಸಿರುವ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ(ರಿ) ಸಂಘದ ತಾಲೂಕು ಘಟಕದವತಿಯಿಂದ ಶಾಂತಿಧೂತ ಗೌತಮ ಬುದ್ದ, ಸಾಮಾಜಿಕ ನ್ಯಾಯದ ಹರಿಕಾರ ಬಸವಣ್ಣ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಒಳಗೊಂಡ ಛಾಯಾಚಿತ್ರವನ್ನು ನೀಡಿ ಸತ್ಕರಿಸಿ ಗೌರವಿಸಲಾಯಿತು.

ಎಂ.ಪಿ.ಲತಾ ಮಲ್ಲಿಕಾರ್ಜುನ ಅವರು ಮಾಜಿ ಉಪ ಮುಖ್ಯಮಂತ್ರಿ ದಿ.ಎಂ.ಪಿ.ಪ್ರಕಾಶ್ ಅವರ ಹಿರಿಯ ಮಗಳು. ಹರಪನಹಳ್ಳಿ ಕ್ಷೇತ್ರದ ಮಾಜಿ ಶಾಸಕ ದಿ.ಎಂ.ಪಿ.ರವೀಂದ್ರ ಅವರ ಹಿರಿಯ ಸಹೋದರಿಯಾಗಿದ್ದಾರೆ. ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೂ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಲಿಲ್ಲ. ಸ್ವಾತಂತ್ರ್ಯ ಬಂದಾಗಿನಿಂದಲೂ ಹರಪನಹಳ್ಳಿ ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳು ಮಹಿಳೆಯರಿಗೆ ಟಿಕೆಟ್ ನೀಡಿರಲಿಲ್ಲ. ಹೀಗಾಗಿ ಸ್ವಾಭಿಮಾನದ ಕಹಳೆ ಮೊಳಗಿಸಿ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ 13 ಸಾವಿರ ಮತಗಳ ಅಂತರದಿಂದ ಗಣಿಧಣಿ ಕರುಣಾಕರರೆಡ್ಡಿ ಅವರನ್ನು ಸೋಲಿಸುವ ಮೂಲಕ ವಿಧಾನಸೌಧ ಪ್ರವೇಶ ಮಾಡಿದ್ದಾರೆ. ಹರಪನಹಳ್ಳಿಯ ಪ್ರಪ್ರಥಮ ಮಹಿಳಾ ಶಾಸಕಿಯಾಗಿ ಇತಿಹಾಸ ನಿರ್ಮಾಣ ಮಾಡಿರುವುದು ಶ್ಲಾಘನೀಯ ಎಂದು ಸಂಘದ ಪದಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ(ರಿ) ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಎನ್.ಕುಮಾರ್ ಪುಣಬಗಟ್ಟಿ, ರಾಜ್ಯ ಸಮಿತಿ ಸದಸ್ಯರಾದ ಹುಣಸ್ಸಿಹಳ್ಳಿ ಕೋಟ್ರಪ್ಪ, ತಾಲೂಕು ಅಧ್ಯಕ್ಷ ಮಾಳ್ಗಿ ಮಂಜುನಾಥ, ಕಾನೂನು ಸಲಹೆಗಾರ ಹೆಚ್.ಉಮೇಶ್, ಪದಾಧಿಕಾರಿಗಳಾದ ಚಿಕ್ಕಹಳ್ಳಿ ನಾಗರಾಜ್, ಡಾ.ಜಿ.ರಾಮಪ್ಪ ಮೈದೂರು, ವಿದ್ಯಾ ಶಂಕರ್ ಮತ್ತಿತರರು ಹಾಜರಿದ್ದರು.