ಡೈಲಿ ವಾರ್ತೆ:27 ಮೇ 2023
ಕೈ ತಪ್ಪಿದ ಮಂತ್ರಿಗಿರಿ: ರಾಜೀನಾಮೆ ನೀಡಲು ಮುಂದಾದ ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್!?
ಬೆಂಗಳೂರು: ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ ಹಿರಿಯ ಕಾಂಗ್ರೆಸ್ ನಾಯಕ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕರಾಗಿದ್ದ ಬಿ.ಕೆ ಹರಿಪ್ರಸಾದ್ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಡಲು ಮುಂದಾಗಿರುವ ಬಗ್ಗೆ ವರದಿಯಾಗಿದೆ.
ಬಿಕೆ ಹರಿಪ್ರಸಾದ್ ಅವರಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಚಿವ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆ ಇತ್ತು. ಮೊದಲ ಸಂಪುಟ ರಚನೆ ಸಂದರ್ಭದಲ್ಲೇ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿತ್ತು
ಆದರೆ ಇದೀಗ ಸಚಿವ ಸ್ಥಾನ ಕೈತಪ್ಪಿದ್ದು, ಬಿ.ಕೆ ಹರಿಪ್ರಸಾದ್ ತೀವ್ರ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಹಿರಿತನಕ್ಕೆ ಬೆಲೆ ಕೊಟ್ಟಿಲ್ಲ ಎಂದು ಬೇಸರಗೊಂಡಿದ್ದಾರೆ ಎನ್ನಲಾಗಿದೆ.
ಪಕ್ಷದ ಕೆಲವರ ನಡೆಯಿಂದ ಅಸಮಾಧಾನಗೊಂಡು ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಬಿಕೆ ಹರಿಪ್ರಸಾದ್ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅವರು ಎಲ್ಲೂ ಹೇಳಿಕೆ ನೀಡಿಲ್ಲ. ಪ್ರತಿಕ್ರಿಯೆಗೆ ಸಂಪರ್ಕಕ್ಕೆ ಸಿಕ್ಕಿಲ್ಲ.
ಇನ್ನು ಸಾಮಾಜಿಕ ಜಾಲತಾಣಗಳಲ್ಲೂ ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಒತ್ತಾಯ ಕೇಳಿಬಂದಿತ್ತು.
ಬಿಲ್ಲವ ಸಮುದಾಯದ ಸ್ವಾಮೀಜಿಗಳು ಕೂಡಾ ಇವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು.
ಆರ್ಯ ಈಡಿಗ ಸಮಾಜದ ಸ್ವಾಮೀಜಿಗಳಿಂದ ಸಹ ಹರಿಪ್ರಸಾದ್ ಅವರನ್ನು ಸಚಿವರನ್ನಾಗಿಸಲು ಒತ್ತಾಯ ಕೇಳಿ ಬಂದಿತ್ತು. ಪ್ರಣವಾನಂದ ಶ್ರೀಗಳು ಹರಿಪ್ರಸಾದ್ , ಸೊರಬ ಶಾಸಕ ಮಧು ಬಂಗಾರಪ್ಪ ಸೇರಿದಂತೆ ಈಡಿಗ ಸಮಾಜದ ಮೂವರು ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದ್ದರು. ಇದೀಗ ಕೊನೆ ಗಳಿಗೆಯಲ್ಲಿ ಹರಿಪ್ರಸಾದ್ ಗೆ ಸಚಿವ ಸ್ಥಾನ ಕೈತಪ್ಪಿದೆ.