ಡೈಲಿ ವಾರ್ತೆ: 06 ಜೂನ್ 2023

ಮಣಿಪುರ: ಕ್ರಿಶ್ಚಿಯನ್ನರ ವಿರುದ್ಧ ದಾಳಿ ಖಂಡಿಸಿ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ಮಂಗಳೂರು: ಮಂಗಳೂರಿನ ಸಮಾನ ಮನಸ್ಕರು ಮತ್ತು ಮಂಗಳೂರು ಕೆಥೊಲಿಕ್ ಸಭಾಗಳು ಜೂನ್ 6ರ ಮಂಗಳವಾರ ಮಂಗಳೂರು ಗಡಿಯಾರ ಗೋಪುರದ ಬಳಿ ಸಂಜೆ ನಾಲ್ಕೂವರೆ ಗಂಟೆಗೆ ಮಣಿಪುರದಲ್ಲಿ ಕ್ರಿಶ್ಚಿಯನರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಪ್ರತಿಭಟನೆ ನಡೆಸಿದರು.

ಮೊದಲು ಬಿಜೆಪಿ ಸರಕಾರದ ವಿಫಲತೆ ಖಂಡಿಸಿ ಘೋಷಣೆ ಕೂಗಿದರು. ಬಿಶಪ್‌ರಿಂದ ಹಿಡಿದು ಕ್ರಿಶ್ಚಿಯನ್ ಭಗಿನಿಯರವರೆಗೆ ಅಪಾರ ಜನಸ್ತೋಮ ಈ ಪ್ರತಿಭಟನೆಯಲ್ಲಿ ಭಾಗವಹಿಸಿತು.

ಮಣಿಪುರ ರಾಜ್ಯದಲ್ಲಿ ಬುಡಕಟ್ಟು ಜನರ ಮೀಸಲಾತಿ ವಿಚಾರದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಚರ್ಚ್‌ಗಳು ಹಾಗೂ ಕ್ರಿಶ್ಚಿಯನ್ನರ ಮೇಲೆ ನಡೆದ ವ್ಯಾಪಕ ದಾಳಿಯನ್ನು ಖಂಡಿಸಿ ಜನರು ಮಣಿಪುರದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ, ಕಥೋಲಿಕ್ ಸಭಾ ಮಂಗಳೂರು ಪ್ರದೇಶ(ರಿ) ಮತ್ತು ಯುನೈಟೆಡ್ ಕ್ರಿಶ್ಚಿಯನ್ ಫೋರಂ ಮಂಗಳೂರು ಇವುಗಳ ಜಂಟಿ ನೇತೃತ್ವದಲ್ಲಿ ಸಾಮೂಹಿಕ ಧರಣಿ ಬೃಹತ್ ಪ್ರಮಾಣದಲ್ಲಿ ನಡೆಯಿತು.

ಮಣಿಪುರದಲ್ಲಿ ಬಹುಸಂಖ್ಯಾತರಾಗಿರುವ ಬುಡಕಟ್ಟು ಸಮುದಾಯದ ಮಧ್ಯೆ ಸೌಹಾರ್ದ ವಾತಾವರಣವನ್ನು ಸಾಧಿಸುವ ಬದಲು ಅಲ್ಲಿನ ಬಿಜೆಪಿ ರಾಜ್ಯ ಸರಕಾರವು ದ್ವೇಷ ರಾಜಕಾರಣವನ್ನು ನಡೆಸುತ್ತಿದೆ. ಮೈತೈ ಸಮುದಾಯಕ್ಕೆ ಮೀಸಲಾತಿ ನೀಡುವ ವಿಚಾರದಲ್ಲಿ ಭುಗಿಲೆದ್ದ ಗಲಭೆಯನ್ನು ಮುಂದಿಟ್ಟು ಕುಕಿ ಸಮುದಾಯದ ಕ್ರಿಶ್ಚಿಯನ್ನರ ಹಾಗೂ ಅವರ ಚರ್ಚ್ ಗಳ ಮೇಲೆ ವ್ಯಾಪಕ ದಾಳಿಗಳನ್ನು ನಡೆಸಿ ನೂರಾರು ಸಂಖ್ಯೆಯಲ್ಲಿ ಪ್ರಾಣಹಾನಿಯಾಗಿದ್ದು, 50,000ಕ್ಕೂ ಮಿಕ್ಕಿ ಜನತೆ ಸಂತ್ರಸ್ತರಾಗಿದ್ದಾರೆ. ಕೋಟ್ಯಂತರ ರೂಪಾಯಿಯ ಆಸ್ತಿಪಾಸ್ತಿ ಹಾನಿಯಾಗಿದೆ. ಒಂಬತ್ತು ಜಿಲ್ಲೆಗಳಲ್ಲಿ ಕರ್ಫ್ಯೂ ಹೇರಲಾಗಿದೆ. ದೂರಸಂಪರ್ಕ,ಇಂಟರ್ ನೆಟ್ ಸೇರಿದಂತೆ ಎಲ್ಲಾ ಸಂಪರ್ಕಗಳನ್ನು ಕಡಿತಗೊಳಿಸಲಾಗಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ದೇಶದ ಒಂದು ಪುಟ್ಟ ರಾಜ್ಯದಲ್ಲಿ ಇಂತಹ ಗಂಭೀರ ಸಮಸ್ಯೆ ತಲೆದೋರಿದರೂ ದೇಶವನ್ನಾಳುವ ಕೇಂದ್ರದ ಬಿಜೆಪಿ ಸರಕಾರವು ಮಾತ್ರ ದಿವ್ಯ ಮೌನ ವಹಿಸಿದೆ ಎಂದು ಪ್ರತಿಭಟನೆಯಲ್ಲಿ ಆಕ್ರೋಶಗಳು ಕೇಳಿ ಬಂದಿತು.

ಮಣಿಪುರ ರಾಜ್ಯದಲ್ಲಿ ಗಲಭೆಯನ್ನು ಸಂಪೂರ್ಣವಾಗಿ ನಿಯಂತ್ರಿಸಿ, ಮತ್ತೆ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕೆಂದು ಈ ವೇಳೆ ಒತ್ತಾಯಿಸಲಾಯಿತು.

ಕಾರ್ಯಕ್ರಮವನ್ನು ರೊಯ್ ಕ್ಯಾಸ್ಟಲಿನೋ, ಸುನಿಲ್ ಕುಮಾರ್ ಬಜಾಲ್, ಆಲ್ಫ್ರೆಡ್ ಮನೋಹರ್, ಸ್ಟ್ಯಾನಿ ಲೋಬೋ, ಕೆ. ಅಶ್ರಫ್, ಮಂಜುಳಾ ನಾಯಕ್ ಮೊದಲಾದವರು ಸಂಘಟಿಸಿದರು.