ಡೈಲಿ ವಾರ್ತೆ: 16 ಜೂನ್ 2023
ಸೌಜನ್ಯ ರೇಪ್ & ಮರ್ಡರ್ ಕೇಸ್ ಬಂಧಿತ ಆರೋಪಿ ಸಂತೋಷ್ ನಿರ್ದೋಷಿ, ಕೋರ್ಟ್ ತೀರ್ಪು!
ಬೆಳ್ತಂಗಡಿ:ಉಜಿರೆಯ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿ ಧರ್ಮಸ್ಥಳದ ನಿವಾಸಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಂತೋಷ್ ರಾವ್ ಗೆ ದೋಷಮುಕ್ತಗೊಳಿಸಿ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಬಳಿಯಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣ ಭಾರೀ ಪ್ರತಿಭಟನೆಗೆ ಕಾರಣವಾಗಿತ್ತು.
ಕಾಲೇಜು ಮುಗಿಸಿ ಮನೆಗೆ ಬರುತ್ತಿದ್ದ ಸೌಜನ್ಯಳನ್ನು ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಪ್ರಕರಣದ ಹಿನ್ನೆಲೆಯಲ್ಲಿ ಸಂತೋಷ್ ರಾವ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.
ಈ ಕುರಿತು ಸುದೀರ್ಘ ಅವಧಿಯ ವಿಚಾರಣೆಯ ಬಳಿಕ ಸಿಬಿಐ ಕೋರ್ಟ್ ನ್ಯಾಯಾಧೀಶರಾದ ಸಿಬಿ ಸಂತೋಷ್ ಪ್ರಕರಣದಲ್ಲಿ ಸಾಕ್ಷಾಧಾರ ಕೊರತೆಯ ಹಿನ್ನೆಲೆಯಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿದ್ದಾರೆ.
2012 ಅಕ್ಟೋಬರ್ 10 ರಂದು ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ಸೌಜನ್ಯ ನಾಪತ್ತೆಯಾಗಿದ್ದಳು. ಈ ಕುರಿತು ಸೌಜನ್ಯ ತಂದೆ ಚಂದ್ರಪ್ಪ ಗೌಡ ಬೆಳ್ತಂಗಡಿ ಪೊಲೀಸ್ ಠಾಣೆಯ ಪೊಲೀಸರಿಗೆ ದೂರು ನೀಡಿದ್ದರು. ಧರ್ಮಸ್ಥಳದ ಬಳಿಯಲ್ಲಿ ಸೌಜನ್ಯ ಮೃತದೇಹ ಪತ್ತೆಯಾಗಿತ್ತು. ಆಕೆಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು.
ಆರಂಭಿಕ ಹಂತದಲ್ಲಿ ಬೆಳ್ತಂಗಡಿ ಠಾಣೆಯ ಪೊಲೀಸರು ತನಿಖೆಯನ್ನು ನಡೆಸಿದ್ದು, ನಂತರದಲ್ಲಿ ಪ್ರಕರಣವನ್ನು ಸಿಐಡಿ ತನಿಖೆಗೆ ವರ್ಗಾಯಿಸಲಾಗಿತ್ತು.ಬಳಿಕ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು.
ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದ ತನಿಖೆಯನ್ನು ನಡೆಸಿದ್ದ ಸಿಬಿಐ ಅಧಿಕಾರಿಗಳು 2016 ರಲ್ಲಿ ತನಿಖೆಯನ್ನು ಪೂರ್ಣಗೊಳಿಸಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದರು.