ಡೈಲಿ ವಾರ್ತೆ:21 ಜೂನ್ 2023

ಅಕ್ಕಿ ಕೊಡಲು ಆಗದಿದ್ರೆ ಅಧಿಕಾರ ಬಿಟ್ಟು ತೊಲಗಿ: ಕಾಂಗ್ರೆಸ್ ವಿರುದ್ಧ ಶೋಭಾ ಕಿಡಿ

ಚಿಕ್ಕಮಗಳೂರು: ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿ ಜೊತೆ ನೀವು ಘೋಷಿಸಿರುವಂತೆ 10 ಕೆಜಿ ಅಕ್ಕಿ ಕೊಡಿ. ಅಂದರೆ ಒಬ್ಬರಿಗೆ ತಲಾ 15 ಕೆಜಿ ಅಕ್ಕಿ ಕೊಡಬೇಕು. ಅಕ್ಕಿ ಕೊಡಲು ಆಗದಿದ್ದರೆ ಅಧಿಕಾರ ಬಿಟ್ಟು ತೊಲಗಿ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ನಡೆದ ಯೋಗ ದಿನಾಚರಣೆಯ ಬಳಿಕ ಮಾತನಾಡಿದ ಅವರು, ಮೋದಿ ಕೊಡುತ್ತಿರುವ ಅಕ್ಕಿ ಸೇರಿ ನೀವು 10 ಕೆಜಿ ಅಕ್ಕಿ ಕೊಡೋದಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮರ್ಯಾದೆ ಇಲ್ಲದ ಬೇಜವಾಬ್ದಾರಿ ಮುಖ್ಯಮಂತ್ರಿ.
ಚುನಾವಣೆಗೂ ಮುನ್ನ ಗ್ಯಾರಂಟಿಗಳನ್ನು ಘೋಷಿಸುವಾಗ ನಿಮ್ಮ ತಲೆಯಲ್ಲಿ ಏನಿತ್ತು? ಮೆದುಳು ಇರಲಿಲ್ಲವಾ, ಸಗಣಿ ತುಂಬಿತ್ತಾ ಎಂದು ಹರಿಹಾಯ್ದರು.

ಒಂದೇ ತಿಂಗಳಿಗೆ ರಾಜ್ಯದಲ್ಲಿ ಅರಾಜಕತೆ ತುಂಬಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, ಕಾಂಗ್ರೆಸ್ಸಿಗರಿಗೆ ಮಾನ-ಮರ್ಯಾದೆ ಇಲ್ಲ. ವೋಟು ಹಾಕಿಸಿಕೊಂಡು ಜನರಿಗೆ ಮೋಸ ಮಾಡಿದ್ದೀರಾ. ಸಿದ್ದರಾಮಯ್ಯನವರೇ ನಿಮ್ಮ ಬೇಜವಾಬ್ದಾರಿ ಹೇಳಿಕೆಗಳನ್ನು ವಾಪಸ್ಸು ತೆಗೆದುಕೊಳ್ಳಿ. ರಾಜ್ಯ ಸರ್ಕಾರ ಒಂದು ಬೇಜವಾಬ್ದಾರಿಯ ಸರ್ಕಾರ. ಚುನಾವಣೆಯನ್ನು ಗೆಲ್ಲುವುದಕ್ಕೆ ಇಲ್ಲಸಲ್ಲದ ಭರವಸೆ, ಆಸೆ ತೋರಿಸಿದ್ದರು ಎಂದು ವಾಗ್ದಾಳಿ ನಡೆಸಿದರು.

ಮಹಿಳೆಯರ ಬಸ್ಸಿಗೆ ಪಾಸ್ ಕೇಳುತ್ತಿದ್ದಾರೆ, ಸರ್ಟಿಫಿಕೇಟ್ ಕೇಳ್ತಿದ್ದಾರೆ. ನಾನು ಮಹಿಳೆ ಅನ್ನೋದಕ್ಕೆ ನನಗೆ ಸರ್ಟಿಫಿಕೇಟ್ ಬೇಕಿಲ್ಲ ಎಂದು ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ. ಅಕ್ಕಿ ಕೊಡೋದಕ್ಕೆ ಕೇಂದ್ರ ಸರ್ಕಾರ ಕೊಡುತ್ತಿಲ್ಲ ಎನ್ನುತ್ತಿದ್ದಾರೆ. ಈಗ ಯಾಕೆ ನೀವು ಮೋದಿ ಕಡೆ ಬೆರಳು ತೋರಿಸುತ್ತೀರಾ? ಯಾವುದೇ ಮುಂದಾಲೋಚನೆ ಇಲ್ಲದೆ ಘೋಷಿಸಿ ಇವತ್ತು ಮೋದಿ ಕಡೆ ತೋರಿಸುತ್ತಿದ್ದೀರಾ. ಇವಕ್ಕೆಲ್ಲಾ ಹಣ ಎಲ್ಲಿಂದ ತರುತ್ತೀರಾ ಎಂದು ನಾವು ಅಂದೇ ಕೇಳಿದ್ದೆವು. ಅಂದು ಸುಮ್ಮನಿದ್ದು ಇಂದು ಅಕ್ಕಿ, ದುಡ್ಡು, ವಿದ್ಯುತ್ ಎಲ್ಲದಕ್ಕೂ ಮೋದಿ ಕಡೆ ತೋರಿಸುತ್ತಿದ್ದೀರಾ ಎಂದು ಕಿಡಿಕಾರಿದರು.

ಎಲ್ಲದಕ್ಕೂ ಮೋದಿಯನ್ನು ತೋರಿಸುವುದಾದರೆ, ಅಂದು ನೀವು ಗ್ಯಾರಂಟಿ ಕಾರ್ಡ್ ಏಕೆ ಹಂಚಿದ್ರಿ? ಯಾರಿಗೆ ಮೋಸ ಮಾಡಿ, ಯಾರ ಮೂಗಿಗೆ ತುಪ್ಪ ಸವರಲು ಹಂಚಿದ್ರಿ? ಬಫರ್ ಸ್ಟಾಕ್ ಇರೋದು ನೆರೆ, ಬರ, ಯುದ್ಧದ ಸಂದರ್ಭದಲ್ಲಿ ಜನರ ಬಳಕೆಗೆ. ನಿಮಗೆ ಅಕ್ಕಿ ಬೇಕಾದರೆ ಬೇರೆ ರಾಜ್ಯದಲ್ಲಿ ಖರೀದಿಸಿ. ನಮ್ಮ ರಾಜ್ಯದ ರೈತರೇ ಅಕ್ಕಿಯನ್ನು ಮಾರುತ್ತಾರೆ. ಅವರ ಬಳಿ ಖರೀದಿಸಿ ಎಂದು ಸಲಹೆ ನೀಡಿದರು.