ಡೈಲಿ ವಾರ್ತೆ:08 ಜುಲೈ 2023

ವಿಶ್ವದೆಲ್ಲೆಡೆ ಸೈಕಲ್‌ನಲ್ಲಿ ಸುತ್ತಾಡಿ ಏಡ್ಸ್ ಜಾಗೃತಿ ಮೂಡಿಸಿದ್ದ ವ್ಯಕ್ತಿ,- ಜೀವನಕ್ಕಾಗಿ ದೇವರ ಬೆಳ್ಳಿ ಆಭರಣ ಕದ್ದು ಜೈಲು ಸೇರಿದ ಭೂಪ

ಬೆಂಗಳೂರು: ವಿಶ್ವದ ಎಲ್ಲೆಡೆ ಸೈಕಲ್‌ನಲ್ಲಿ ಸುತ್ತಾಡಿ ಏಡ್ಸ್ ಜಾಗೃತಿ ಮೂಡಿಸಿದ್ದ ವ್ಯಕ್ತಿ, ಜೀವನ ಸಾಗಿಸಲು ದೇವಸ್ಥಾನದಲ್ಲಿ ಬೆಳ್ಳಿ ಆಭರಣ ಕಳ್ಳತನ ಮಾಡಿ ಇದೀಗ ಪರಪ್ಪನ ಅಗ್ರಹಾರ ಕಾರಾಗೃಹ ಸೇರಿದ್ದಾನೆ.

ಮಹಾರಾಷ್ಟ್ರ ಮೂಲದ ರವಿ ನಾಯ್ದು ಬಂಧಿತ. ನಂಜಪ್ಪ ಸರ್ಕಲ್‌ನಲ್ಲಿ ಇರುವ ಕನ್ಯಾಕಾಪರಮೇಶ್ವರಿ ದೇವಸ್ಥಾನಕ್ಕೆ ಭಕ್ತರ ಸೋಗಿನಲ್ಲಿ ಪ್ರವೇಶ ಮಾಡಿದ್ದ ರವಿ ನಾಯ್ದು ಬರುತ್ತಿದ್ದ. ಹೆಗಲಿನಲ್ಲಿ ಜೋಳಿಗೆ, ತಲೆ ಮೇಲೊಂದು ಟೋಪಿ ಧರಿಸಿಕೊಂಡು ಭಕ್ತರ ಸಾಲಿನಲ್ಲಿ ಬಂದು ದರ್ಶನ ಪಡೆದು ಪ್ರಸಾರ ಸ್ವೀಕರಿಸಿ ಹೋಗುತ್ತಿದ್ದ. ಈ ನಡುವೆ ನವಗ್ರಹದ ಬಳಿ ಬೆಳ್ಳಿ ಆಭರಣ ಇರುವುದು ಗಮನಿಸಿದ್ದ.

ಜೂ.28ರ ರಾತ್ರಿ 9.10ರಲ್ಲಿ ದೇವಸ್ಥಾನಕ್ಕೆ ಹೋಗಿ 1.50 ಕೆಜಿ ಬೆಳ್ಳಿ ಆಭರಣ ಕಳವು ಮಾಡಿದ್ದ. ಈ ಬಗ್ಗೆ ಬಂದ ದೂರಿನ ಮೇರೆಗೆ ಎ್ಐಆರ್ ದಾಖಲು ಮಾಡಿಕೊಂಡ ವಿವಿ ಪುರ ಪೊಲೀಸರು, ದೇವಸ್ಥಾನದ ಅಕ್ಕಪಕ್ಕದಲ್ಲಿ 100 ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದ್ದರು. ದೇವಸ್ಥಾನಕ್ಕೆ ಪ್ರವೇಶ ಮಾಡಿದ ದೃಶ್ಯಾವಳಿ ಮತ್ತು ಹೊರಗಡೆ ಲಭ್ಯವಾದ ದೃಶ್ಯಾವಳಿ ಹೋಲಿಕೆ ಆಗಿರುವ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ದಕ್ಷಿಣ ವಿಭಾಗ ಡಿಸಿಪಿ ಕೃಷ್ಣಕಾಂತ್ ತಿಳಿಸಿದ್ದಾರೆ. ಬಂಧಿತ ಆರೋಪಿ ರವಿ ನಾಯ್ಡುನನ್ನು ವಿಚಾರಣೆ ನಡೆಸಿದಾಗ ಅಶ್ಚರಿಯ ಮಾಹಿತಿ ಲಭ್ಯವಾಗಿವೆ.

2000 ದಿಂದ 2006ರವರೆಗೆ ಸೈಕಲ್ ಏರಿ ವಿಶ್ವದ ಹಲವು ದೇಶಗಳಲ್ಲಿ ಸುತ್ತಾಡಿ ಏಡ್ಸ್ ಕುರಿತು ಜಾಗೃತಿ ಮೂಡಿಸಿದ್ದ ಸಂಗತಿ ಬೆಳಕಿಗೆ ಬಂದಿದೆ. ಈತನ ಸಾಧನೆ ಮೆಚ್ಚಿ ಮಹಾರಾಷ್ಟ್ರದ ಬಾಳಾ ಠಾಕ್ರೆ ಬೈಕ್‌ಯೊಂದನ್ನು ಉಡುಗೋರೆ ನೀಡಿದ್ದರು ಎನ್ನಲಾಗಿದೆ.

ಇದೀಗ ಊಟಕ್ಕೂ ಪರದಾಡುವಂತಹ ಸ್ಥಿತಿ ಉಂಟಾಗಿ ಸಣ್ಣಪುಟ್ಟ ಕಳ್ಳತನ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಚಿಂದಿ ಆಯುತ್ತಾ ಬಂದ ಹಣದಲ್ಲಿ ಸಹ ಒಂದೊತ್ತು ಊಟ ಮಾಡುತ್ತಿದ್ದ ಸಂಗತಿ ಗೊತ್ತಾಗಿದೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.