ಡೈಲಿ ವಾರ್ತೆ:08 ಜುಲೈ 2023

ಬೆಳ್ಳಂಬೆಳಗ್ಗೆ ಹಳ್ಳಿ ಹುಡ್ಗನಂತೆ ಭತ್ತದ ಗದ್ದೆಯಲ್ಲಿ ನಾಟಿ ಮಾಡಿದ ರಾಹುಲ್‌ ಗಾಂಧಿ!

ಚಂಡೀಗಢ: ದೇಶದ ಹಲವು ರಾಜ್ಯಗಳಲ್ಲಿ ಮಳೆಗಾಲ ಆರಂಭವಾಗಿದ್ದು, ಕೃಷಿ ಚಟುವಟಿಕೆ ಗರಿಗೆದರಿದೆ.
ರೈತರು ಪ್ರಾದೇಶಿಕ ಬೆಳೆಗಳನ್ನ ಬೆಳೆಯಲು ಶುರು ಮಾಡಿದ್ದಾರೆ. ಶನಿವಾರ ಬೆಳ್ಳಂಬೆಳಗ್ಗೆ ಹರಿಯಾಣದ ಸೋನಿಪತ್‌ನ ಮದೀನಾ ಗ್ರಾಮಕ್ಕೆ ಭೇಟಿ ನೀಡಿದ್ದ ರಾಹುಲ್‌ ಗಾಂಧಿ ರೈತರೊಂದಿಗೆ ಗದ್ದೆಗಿಳಿದು ಭತ್ತದ ನಾಟಿ ಮಾಡಿದ್ದಾರೆ.

ಹಿಮಾಚಲ ಪ್ರದೇಶಕ್ಕೆ ಹೋಗುತ್ತಿದ್ದ ರಾಹುಲ್‌ ಗಾಂಧಿ ಭತ್ತದ ಗದ್ದೆಯಲ್ಲಿ ರೈತರು ನಾಟಿ ಮಾಡುತ್ತಿರುವುದನ್ನ ಕಂಡಿದ್ದಾರೆ. ಈ ವೇಳೆ ಕಾರು ನಿಲ್ಲಿಸಿ, ಹಳ್ಳಿ ಹುಡುಗನಂತೆ ಮೊಣಕಾಲುದ್ದಕ್ಕೆ ಪ್ಯಾಂಟ್‌ ಮಡಿಸಿಕೊಂಡು ರೈತರೊಂದಿಗೆ ಗದ್ದೆಗಿಳಿದು ಅವರಿಗೆ ನಾಟಿ ಮಾಡಲು ಸಹಾಯ ಮಾಡಿದ್ದಾರೆ.
ಕಾಂಗ್ರೆಸ್‌ ಮುಖಂಡರೂ ಸಹ ರೈತರೊಂದಿಗೆ ಸೇರಿಕೊಂಡು ಟ್ರ್ಯಾಕ್ಟರ್‌ ಮೂಲಕ ಗದ್ದೆ ಉಳುಮೆ ಮಾಡಿ ಭತ್ತದ ನಾಟಿಗೆ ಸಹಕರಿಸಿದ್ದಾರೆ. ಬಳಿಕ ರೈತರೊಂದಿಗೆ ಸಂವಾದ ನಡೆಸಿ, ಕಷ್ಟ ಸುಖಗಳನ್ನ ವಿಚಾರಿಸಿದ್ದಾರೆ.

2024ರ ಲೋಕಸಭೆ ಚುನಾವಣೆ ಹಿನ್ನೆಲೆಯ ಭರ್ಜರಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿರುವ ರಾಹುಲ್‌ ಗಾಂಧಿ ಸಮಾಜದ ಎಲ್ಲ ಹಂತದ ಜನರನ್ನ ಭೇಟಿಯಾಗುತ್ತಿದ್ದಾರೆ. ಇತ್ತೀಚೆಗಷ್ಟೇ ದೆಹಲಿಯ ಕರೋಲ್ ಬಾಗ್ ಪ್ರದೇಶದಲ್ಲಿ ಬೈಕ್ ಮೆಕ್ಯಾನಿಕ್ ಕಾರ್ಯಾಗಾರಕ್ಕೆ ಭೇಟಿ ನೀಡಿದ್ದರು. ವರ್ಕ್‌ಶಾಪ್‌ನಲ್ಲಿ ಮೆಕ್ಯಾನಿಕ್‌ಗಳೊಂದಿಗೆ ಸಂಭಾಷಣೆ ನಡೆಸಿದ್ದರು. ಈ ವೇಳೆ ಮೋಟಾರ್‌ ಸೈಕಲ್‌ಗಳನ್ನು ರಿಪೇರಿ ಮಾಡೋದನ್ನ ಪ್ರಯತ್ನಿಸಿದ್ದರು. ಕರ್ನಾಟಕದಲ್ಲೂ ರಾಹುಲ್‌ ಗಾಂಧಿ ಬಸ್ಸಿನಲ್ಲಿ ಕುಳಿತು ಮಹಿಳಾ ಪ್ರಯಾಣಿಕರೊಂದಿಗೆ, ವಿದ್ಯಾರ್ಥಿಗಳೊಂದಿಗೆ ಹಾಗೂ ಸ್ವಿಗ್ಗಿ ಡೆಲಿವರಿ ಬಾಯ್ಸ್‌ಗಳೊಂದಿಗೆ ಸಂವಾದ ನಡೆಸಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದ್ದರು.

ಮಾನನಷ್ಟ ಕೇಸ್‌ನಲ್ಲಿ ರಾಹುಲ್‌ ಗಾಂಧಿಗೆ ಹಿನ್ನಡೆ:
ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿಯನ್ನು ಸಂಸದ ಸ್ಥಾನದಿಂದ ವಜಾಗೊಳಿಸಿ, 2 ವರ್ಷ ಜೈಲು ಶಿಕ್ಷೆ ವಿಧಿಸಿದ್ದ ಸೂರತ್ ನ್ಯಾಯಾಲಯ ಆದೇಶವನ್ನು ಶುಕ್ರವಾರ ಗುಜರಾತ್ ಹೈಕೋರ್ಟ್ ಎತ್ತಿ ಹಿಡಿದಿತ್ತು. ಅವರ ವಿರುದ್ಧ ಇನ್ನೂ 10 ಕ್ರಿಮಿನಲ್ ಕೇಸ್‌ಗಳು ಬಾಕಿ ಇವೆ ಎಂದು ಆದೇಶದ ವೇಳೆ ನ್ಯಾಯಮೂರ್ತಿ ಹೇಮಂತ್ ಪ್ರಚಕ್ ತಿಳಿಸಿದ್ದರು.

ಗುಜರಾತ್ ಹೈಕೋರ್ಟ್ ಕೆಳಹಂತದ ನ್ಯಾಯಾಲಯದ ಆದೇಶ ಎತ್ತಿ ಹಿಡಿದಿರುವ ಹಿನ್ನಲೆ ಅವರ ರಾಜಕೀಯ ಭವಿಷ್ಯ ಏನಾಗಬಹುದು ಎಂಬುದು ಎಲ್ಲರ ಕುತೂಹಲವಾಗಿದೆ.

ಹಿನ್ನೆಲೆ ಏನು?
ಕೆಳ ಹಂತದ ಆದೇಶವನ್ನು ಗುಜರಾತ್ ಹೈಕೋರ್ಟ್ ಎತ್ತಿ ಹಿಡಿದಿರುವ ಹಿನ್ನಲೆ ಸದ್ಯ ರಾಹುಲ್ ಗಾಂಧಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಅವಕಾಶಗಳಿದೆ. ಮೊದಲು ಅವರು ಜಾಮೀನು ಅರ್ಜಿ ಸಲ್ಲಿಸಬೇಕಾಗುತ್ತದೆ. ಜಾಮೀನು ಅರ್ಜಿ ಪುರಸ್ಕರಿಸಿ ಪ್ರಕರಣದ ವಿಚಾರಣೆ ನಡೆಸಿದರೆ ರಾಹುಲ್ ಗಾಂಧಿಗೆ ತಾತ್ಕಾಲಿಕ ರಿಲೀಫ್ ಸಿಗಲಿದೆ. ಒಂದು ವೇಳೆ ಸುಪ್ರೀಂಕೋರ್ಟ್ ಜಾಮೀನು ನೀಡಲು ನಿರಾಕರಿಸಿದರೆ ಅವರು ಜೈಲಿಗೆ ಹೋಗಬೇಕಾದ ಅನಿವಾರ್ಯ ಸೃಷ್ಟಿಯಾಗಲಿದೆ ಎಂದು ಹೇಳಿತ್ತು.

ಪ್ರಕರಣದ ಸುದೀರ್ಘ ವಿಚಾರಣೆ ಬಳಿಕ ರಾಹುಲ್ ಗಾಂಧಿ ಅವರನ್ನು ದೋಷಮುಕ್ತಗೊಳಿಸಿದರೆ ಇಡಿ ಪ್ರಕರಣದಿಂದ ಅವರು ಪಾರಾಗಲಿದ್ದಾರೆ. ಒಂದು ವೇಳೆ ಅವರು ತಪ್ಪಿತಸ್ಥರು ಎಂದು ಸುಪ್ರೀಂಕೋರ್ಟ್ ಕೂಡಾ ಆದೇಶ ನೀಡಿದರೆ ಅವರ ರಾಜಕೀಯ ಜೀವನ ಮಸುಕಾಗಲಿದೆ. ಸೂರತ್ ಮ್ಯಾಜಿಸ್ಟ್ರೇಟ್ ಕೋರ್ಟ್ 2 ವರ್ಷದ ಶಿಕ್ಷೆ ನೀಡಿರುವ ಹಿನ್ನಲೆ 2 ವರ್ಷದ ಸೆರೆವಾಸದ ಜೊತೆಗೆ ಅವರು ಜನಪ್ರತಿನಿಧಿಗಳ ಕಾನೂನಿನ ಪ್ರಕಾರ 6 ವರ್ಷ ಚುನಾವಣೆಗೆ ಸ್ಪರ್ಧಿಸಲು ಅನರ್ಹರಾಗಲಿದ್ದಾರೆ. ಒಟ್ಟು 8 ವರ್ಷಗಳ ರಾಜಕೀಯ ಬದುಕು ನಾಶವಾಗಲಿದೆ. ಅವರ ಪ್ರಧಾನಿಯಾಗಬೇಕು ಎಂಬ ಕನಸಿಗೆ ದೊಡ್ಡ ಹಿನ್ನಡೆಯಾಗಲಿದೆ.

ಇಂತಹ ಪ್ರಕರಣ ನ್ಯಾಯಾಲಯದ ಮುಂದೆ ಬಂದಿತ್ತು. 2013 ಮತ್ತು 2018ರ ಲಿಲಿ ಥಾಮಸ್ ಮತ್ತು ಲೋಕ ಪ್ರಹಾರಿ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್, ಕೆಳ ಹಂತದ ನ್ಯಾಯಾಲಯಗಳ ಶಿಕ್ಷೆಯನ್ನು ಅಮಾನತುಗೊಳಿಸಿದರೆ ಅಥವಾ ಮೇಲ್ಮನವಿ ನ್ಯಾಯಾಲಯವು ಶಿಕ್ಷೆಗೆ ತಡೆ ನೀಡಿದರೆ, ಜನಪ್ರತಿನಿಧಿ ಕಾಯ್ದೆಯಡಿ ಸಾರ್ವಜನಿಕ ಪ್ರತಿನಿಧಿಯ ಅನರ್ಹತೆಯನ್ನು ರದ್ದುಗೊಳಿಸಬಹುದು ಎಂದು ಅಭಿಪ್ರಾಯಪಟ್ಟಿತ್ತು.