ಡೈಲಿ ವಾರ್ತೆ: 19 ಜುಲೈ 2023

ಕುಂದಾಪುರ:ಮರುವಂತೆ ಬೀಚ್‌ನಲ್ಲಿ ಸಮುದ್ರಪಾಲಾದ ಯುವಕನ ಮೃತದೇಹ ಪತ್ತೆ!

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ತ್ರಾಸಿ ಮರವಂತೆ ಬೀಚ್‌ನಲ್ಲಿ ನಿನ್ನೆ ಮಧ್ಯಾಹ್ನದ ವೇಳೆ ಗದಗ ಮೂಲದ ಮೂವರು ಯುವಕರು ಈಜಲು ಹೋಗಿ ಓರ್ವ ಸಮುದ್ರದ ಅಬ್ಬರದ ಅಲೆಗೆ ಸಿಲುಕಿ ನೀರು ಪಾಲಾಗಿದ್ದು. ಇಂದು ಆತನ ಮೃತದೇಹ ಪತ್ತೆಯಾಗಿದೆ.

ಗದಗ ಜಿಲ್ಲೆಯ ಮುಂಡರಗಿ ತಾಲೂಕು ಮೇವಂಡಿ ಗ್ರಾಮದ 23 ವರ್ಷ ಪ್ರಾಯದ ಪೀರ್ ನದಾಫ್ ಮೃತ ಯುವಕ. ಮೃತ ದೇಹವು ಗುಜ್ಜಾಡಿ ಗ್ರಾಮದ ಕಂಚುಗೋಡು ಸನ್ಯಾಸಿ ಬಲ್ಲೆ ಬಳಿ ಪತ್ತೆಯಾಗಿದೆ.

ಯುವಕ ಕಳೆದ ನಾಲ್ಕು ವರ್ಷಗಳಿಂದ ಪಡುಬಿದ್ರಿಯಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ. ನಿನ್ನೆ ನಾನು ಊರಿಗೆ ಹೋಗಿ ಬರುತ್ತೇನೆ ಎಂದು ಸ್ನೇಹಿತರ ಬಳಿ ಹೇಳಿ ಮರವಂತೆ ಬೀಚ್‌ಗೆ ಬಂದಿದ್ದ ಎಂದು ತಿಳಿದು ಬಂದಿದೆ. ಇಂದು ಬೆಳಿಗ್ಗೆ ಅಂಬಿಕಾ ಖಾರ್ವಿ ಮಹಿಳೆ ಮನೆಯ ಬಳಿ ಸಮುದ್ರದ ಹತ್ತಿರ ಹೋಗುತ್ತಿರುವಾಗ ಸಮುದ್ರದಲ್ಲಿ ತೇಲಾಡುತ್ತಿರುವ ಮೃತ ದೇಹ ನೋಡಿ ಗಂಗೊಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಗಂಗೊಳ್ಳಿ ಪೊಲೀಸ್ ಸಿಬ್ಬಂದಿ ಹಾಗೂ ಜೀವ ರಕ್ಷಕ ಈಜು ತಜ್ಞ ದಿನೇಶ್ ಖಾರ್ವಿ ತಂಡ, ಆಂಬ್ಯುಲೆನ್ಸ್ ಡ್ರೈವರ್ ಮೃತ ದೇಹವನ್ನು ನೀರಿನಿಂದ
ಮೇಲಕ್ಕೆ ತಂದು ಮರಣೋತ್ತರ ಪರೀಕ್ಷೆಗೆ ಕುಂದಾಪುರ ಸರಕಾರಿ ತಾಲೂಕು ಆಸ್ಪತ್ರೆಗೆ ರವನಿಸಿದ್ದಾರೆ.
ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ಹರೀಶ್ ನಾಯ್ಕ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.