ಡೈಲಿ ವಾರ್ತೆ:20 ಜುಲೈ 2023

ಶಂಕಿತ ಉಗ್ರರ ಬಂಧನ ಪ್ರಕರಣ: ಕುರಿ ವ್ಯಾಪಾರಿಯಾಗಿದ್ದ ಜುನೈದ್ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿದ್ಹೇಗೆ?

ಬೆಂಗಳೂರು: ಸಿಸಿಬಿ ಪೊಲೀಸರಿಂದ ಐವರು ಶಂಕಿತ ಉಗ್ರರ ಬಂಧನ ಪ್ರಕರಣದಲ್ಲಿ ಮಹತ್ವದ ಮಾಹಿತಿಗಳು ಹೊರಬೀಳುತ್ತಲೇ ಇದೆ. ಸದ್ಯ ಪರಾರಿಯಾಗಿರುವ ಪ್ರಕರಣದ ಎ2 ಆರೋಪಿ ಜುನೈದ್ ಮೋಸ್ಟ್ ವಾಂಟಡ್ ಕ್ರಿಮಿನಲ್ ಆಗಿದ್ದು, ಈತನ ಹಿನ್ನೆಲೆ ಇದೀಗ ಬೆಳಕಿಗೆ ಬಂದಿದೆ.

ಅವಮಾನದ ದ್ವೇಷದಿಂದ ಕೃತ್ಯವೆಸಗಿ ಜೈಲು ಹೋಗಿದ್ದ ಜುನೈದ್, ಜೈಲಿನಿಂದ ಹೊರ ಬಂದಿದ್ದು ಜಿಹಾದಿಯಾಗಿ. ಈತ ಹೆಬ್ಬಾಳದ ಸುಲ್ತಾನ್ ಪಾಳ್ಯದಲ್ಲಿ ವಾಸವಿದ್ದ. ಕುರಿ ವ್ಯಾಪಾರ ಮಾಡ್ಕೊಂಡು ಜೀವನ ನಡೆಸುತ್ತಿದ್ದ. 2017ರಲ್ಲಿ ಜಿ. ಸಿ ನಗರದ ನೂರ್ ಅಹ್ಮದ್ ಎಂಬಾತನ ಜೊತೆ ಜಗಳ ಆಗಿತ್ತು. ಹಣಕಾಸಿನ ವಿಚಾರಕ್ಕೆ ಮನೆಗೆ ಬಂದು ಪತ್ನಿ ಮುಂದೆಯೇ ಜುನೈದ್ ಅಂಗಿ ಬಿಚ್ಚಿ, ಅವಮಾನಿಸಿ, ಹಲ್ಲೆ ಮಾಡಿ ಹೋಗಿದ್ದ.
ಅವಮಾನದ ಪ್ರತೀಕಾರವಾಗಿ ಅದೇ ವರ್ಷದ ಸೆಪ್ಟೆಂಬರ್ನಲ್ಲಿ ನೂರ್ನನ್ನು ಜುನೈದ್ ಅಪಹರಿಸಿ ಕೊಲೆ ಮಾಡಿದ್ದ. ಬಳಿಕ ಜೈಲಿಗೆ ಹೋದವ ನೇರ ಸಂಪರ್ಕ ಮಾಡಿದ್ದು, ಶಂಕಿತ ಉಗ್ರ ನಾಸೀರ್ ಎಂಬಾತನನ್ನು. ಜೈಲಿನಿಂದ ಹೊರ ಬಂದು ಮತ್ತೆ 2020ರಲ್ಲಿ ರಕ್ತಚಂದನ ಸಾಗಿಸುವ ಪ್ರಕರಣದಲ್ಲಿ ಒಳ ಹೋಗಿದ್ದ. ನಂತರ ಜಾಮೀನಿನಿಂದ ಹೊರ ಬಂದವ ಸಂಪೂರ್ಣ ಟೀಂ ಕಟ್ಟಿದ್ದ. ಬಳಿಕ ಅವರ ತಂಡ ನೇರ ದುಬೈಗೆ ಹಾರಿತ್ತು.

ವಿದೇಶದಲ್ಲಿ ಕೆಲ ಉಗ್ರ ಸಂಘಟನೆಗಳ ಸಂಪರ್ಕ ಪಡೆದು ಹ್ಯಾಂಡಲ್ ಮಾಡುತ್ತಿದ್ದ. ಸದ್ಯ ದುಬೈನಲ್ಲಿರುವ ಜುನೈದ್ ಪತ್ತೆಗೆ ಸಿಸಿಬಿ ಮತ್ತು ಕೇಂದ್ರ ತನಿಖಾ ಸಂಸ್ಥೆ ಮುಂದಾಗಿದೆ.