ಡೈಲಿ ವಾರ್ತೆ:21 ಜುಲೈ 2023
ಮಣಿಪುರ:ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ – ಪ್ರಮುಖ ಆರೋಪಿ ಮನೆಗೆ ಬೆಂಕಿ ಹಾಕಿ ಆಕ್ರೋಶ
ಇಂಫಾಲ್: ಮಣಿಪುರದಲ್ಲಿ ಮಹಿಳೆಯರನ್ನ ಬೆತ್ತಲೆ ಮೆರವಣಿಗೆ ಮಾಡಿದ್ದ ಪ್ರಕರಣ ಮಣಿಪುರದಲ್ಲಿ ಮತ್ತಷ್ಟು ಹಿಂಸಾತ್ಮಕ ಪ್ರತಿಭಟನೆ ಕಾರಣವಾಗಿದೆ. ಪ್ರಕರಣದ ಪ್ರಮುಖ ಆರೋಪಿ ಹುಯಿರೆಮ್ ಹೆರಾದಾಸ್ ಸಿಂಗ್ ಮನೆಯನ್ನ ಬೆಂಕಿ ಹಾಕಿ ಸುಟ್ಟುಹಾಕುವ ಮೂಲಕ ಪ್ರತಿಭಟನಾಕಾರರ ಗುಂಪು ಆಕ್ರೋಶ ವ್ಯಕ್ತಪಡಿಸಿದೆ.
ಮಣಿಪುರದ ಗುಡ್ಡಗಾಡು ಪ್ರದೇಶಗಳಲ್ಲಿ ಇಬ್ಬರು ಮಹಿಳೆಯರನ್ನ ಬೆತ್ತಲೆಯಾಗಿ ಮೆರವಣಿಗೆ ಮಾಡುವ ಎರಡು ತಿಂಗಳ ಹಳೆಯ ವೀಡಿಯೊ ಬುಧವಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಕಳೆದ ಮೇ 3 ರಂದು ಈಶಾನ್ಯ ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ಒಂದು ದಿನದ ನಂತರ ಕಾಂಗ್‌ಪೋಕ್ಪಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿತ್ತು.
ವಿಡೀಯೋ ವೈರಲ್ ಆದ ಬಳಿಕ ರೊಚ್ಚಿಗೆದ್ದ ಜನ ಪ್ರತಿಭಟನೆಗೆ ಮುಂದಾಗಿದ್ದರು. ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದ ಮಣಿಪುರದ ತೌಬಲ್ ಜಿಲ್ಲೆಯ ನಾಂಗ್‌ಪೋಕ್ ಸೆಕ್ಮೈ ಪೊಲೀಸರು ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಕೇಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಗುರುವಾರ ಸಂಜೆ ವೇಳೆಗೆ ನಾಲ್ವರನ್ನ ಬಂಧಿಸಲಾಗಿತ್ತು. ಆದರೂ ಪ್ರತಿಭಟನಾಕಾರರ ಆಕ್ರೋಶ ಮುಂದುವರಿದಿದ್ದು, ಶುಕ್ರವಾರವೂ ಹಿಂಸಾತ್ಮಕ ರೂಪ ತಾಳಿದೆ. ಆಕ್ರೋಶಗೊಂಡ ಪ್ರತಿಭಟನಾಕಾರರ ಗುಂಪು ಪ್ರಮುಖ ಆರೋಪಿ ಮನೆಗೆ ಬೆಂಕಿ ಹಚ್ಚಿ ಸುಟ್ಟುಹಾಕಿದೆ.
ಬರೋಬ್ಬರಿ 77 ದಿನಗಳಿಂದ ಎರಡು ಪ್ರಮುಖ ಸಮುದಾಯಗಳ ನಡುವೆ ನಡೆಯುತ್ತಿರೋ ಸಂಘರ್ಷದ ಕಾರಣದಿಂದ ಮಣಿಪುರ ಎಂಬ ಪುಟ್ಟ ರಾಜ್ಯ ಹೊತ್ತಿ ಉರಿಯುತ್ತಿದೆ. ಈವರೆಗೂ ನೂರಾರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಖುದ್ದು ಸೇನೆ ಫೀಲ್ಡ್‌ಗೆ ಇಳಿದರೂ ಸಂಘರ್ಷ ಶಮನವಾಗಿಲ್ಲ. ದಿನೇ ದಿನೇ ಹಿಂಸಾಚಾರ ಹೆಚ್ಚಾಗುತ್ತಲೇ ಸಾಗಿದೆ. ಶಾಂತಿ ಎಂಬುದಿಲ್ಲಿ ಮರೀಚಿಕೆ ಆಗಿದೆ. ಇಂತಹ ಸಂದರ್ಭದಲ್ಲಿ ಮನುಕುಲ ತಲೆತಗ್ಗಿಸುವಂತಹ ವೀಡಿಯೋ ಒಂದು ಹೊರಬಂದಿತ್ತು. ಆದಿವಾಸಿ ಸಮುದಾಯದ ಇಬ್ಬರು ಮಹಿಳೆಯರನ್ನು ಸಂಪೂರ್ಣ ಬೆತ್ತಲೆ ಮಾಡಿದ ರಾಕ್ಷಸಿ ಗುಂಪೊಂದು, ಅವರನ್ನು ನೂರಾರು ಜನರ ಸಮ್ಮುಖದಲ್ಲಿ ಮೆರವಣಿಗೆ ಮಾಡಿತ್ತು. ಈ ದೃಶ್ಯಾವಳಿ ಇದು ಇಡೀ ದೇಶದ ಮನಕಲಕಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.
ಶಾಂತಿಭದ್ರತೆಯ ಕಾರಣದಿಂದ ಈ ವೀಡಿಯೋವನ್ನು ಯಾರೂ ಶೇರ್ ಮಾಡದಂತೆ ಕೇಂದ್ರ ಸರ್ಕಾರ ಆದೇಶ ನೀಡಿದೆ. ಎಲ್ಲಾ ವೀಡಿಯೋಗಳನ್ನು ತೆಗೆದು, ನೆಲದ ಕಾನೂನು ಪಾಲಿಸುವಂತೆ ಟ್ವಿಟ್ಟರ್ ಸಂಸ್ಥೆಗೆ ಸೂಚನೆ ಮಾಡಿದೆ.