ಡೈಲಿ ವಾರ್ತೆ:21 ಜುಲೈ 2023
ಮೊಡಂಕಾಪು : ಕಾರ್ಮೆಲ್ ಶಿಕ್ಷಕ – ರಕ್ಷಕ ಸಂಘದ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ
ಬಂಟ್ವಾಳ : ಮೊಡಂಕಾಪು ಕಾರ್ಮೆಲ್ ಶಿಕ್ಷಕ – ರಕ್ಷಕ ಸಂಘದ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಮೊಡಂಕಾಪು ಅನುಗ್ರಹ ಸಭಾಭವನದಲ್ಲಿ ಗುರುವಾರ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜೆ.ಸಿ.ಐ ನ ರಾಷ್ಟ್ರೀಯ ತರಬೇತುದಾರ ಪೀಟರ್ ಆಂಟನಿ ಪಿಂಟೋ ಮಾತನಾಡಿ ವಿದ್ಯಾರ್ಥಿಗಳ ಹೆತ್ತವರು ಮಕ್ಕಳ ಚಲನ ವಲನ ಬಗ್ಗೆ ಹೆಚ್ಚಿನ ಗಮನವಹಿಸಿ ಸೂಕ್ತ ಮಾರ್ಗದರ್ಶನವನ್ನು ನೀಡಿದ್ದಲ್ಲಿ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು ಎಂದರು.
ಸಂಘದ ಅಧ್ಯಕ್ಷೆ ನೇತ್ರಾವತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲೆ ವಂದನೀಯ ಭಗಿನಿ ನವೀನ ಎ.ಸಿ ಲೆಕ್ಕಪತ್ರ ಮಂಡಿಸಿದರು. ವೇದಿಕೆಯಲ್ಲಿ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ವಂದನೀಯ ಭಗಿನಿ ರೋಸಿಲ್ಡ್ ಎ.ಸಿ, ಕಾರ್ಮೆಲ್ ಶಿಕ್ಷಕ ರಕ್ಷಕ ಸಂಘದ ಕಾರ್ಯಕಾರಿ
ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಇದೇ ವೇಳೆ 2022- 23ನೇ ಶೈಕ್ಷಣಿಕ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ದಿವ್ಯಶ್ರೀ ಹಾಗೂ ಫಾತಿಮತುಲ್ ಹಸ್ನ, ಕಾರ್ಮೆಲ್ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಆರನೇ ರ್ಯಾಂಕ್ ಪಡೆದ ಗೌತಮಿ, ಅತ್ಯಂತ ಹೆಚ್ಚು ಅಂಕ ಗಳಿಸಿರುವ ಸಮಂತ ಡಿ’ಸೋಜ ಮತ್ತು ಸಾಕ್ಷಿ ಸಾಲಿಯನ್ ಅವರನ್ನು ಸನ್ಮಾನಿಸಲಾಯಿತು.
ರಾಷ್ಟ್ರಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿನಿ ನಿಧಿ ಎಂ.ಎಸ್, ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಪಡೆದ ಮೆಲಿಸಾ ಮೆನೇಜಸ್, ಲಿಖಿತ್ ಜೆ ,
ಬಾಲ್ ಬ್ಯಾಡ್ಮಿಂಟನ್ ಆಟಗಾರ ದಿತೇಶ್, ಟೇಬಲ್ ಟೆನಿಸ್ ಕ್ರೀಡಾಪಟು ಪ್ರಣತಿ, ಟೈಕಾಂಡು ಆಟಗಾರ ರೇಫನ್ ಅಹಮದ್, ರಾಜ್ಯಮಟ್ಟದ ಯುವ ಸ್ಪ ಸಂಸತ್ ಸ್ಪರ್ಧೆಯಲ್ಲಿ ಭಾಗವಹಿಸಿದ ಅಭಿಷೇಕ್ ಅವರನ್ನು ಸನ್ಮಾನಿಸಲಾಯಿತು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಶೇಷ ದರ್ಜೆಯಲ್ಲಿ ಉತ್ತೀರ್ಣರಾದ 130 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಉಪನ್ಯಾಸಕ ಹಾಗೂ ಕ್ರೀಡಾ ತರಬೇತುದಾರ ಸುರೇಶ್ ನಂದಟ್ಟು ಅವರನ್ನು ಸನ್ಮಾನಿಸಲಾಯಿತು.
ಭಗಿನಿ ವೀರ ಎ.ಸಿ. ಸ್ವಾಗತಿಸಿ, ಕನ್ನಡ ಉಪನ್ಯಾಸಕಿ ಉಷಾ ಲಕ್ಷ್ಮಣ್ ವಂದಿಸಿದರು. ಉಪನ್ಯಾಸಕರಾದ ಸಂತೋಷ್ ಡಿ’ಸೋಜ ಹಾಗೂ ಗಾಯತ್ರಿ ಕಾರ್ಯಕ್ರಮ ನಿರೂಪಿಸಿದರು.