ಡೈಲಿ ವಾರ್ತೆ:22 ಜುಲೈ 2023

ಊಟದ ನಂತರ ಹೊಟ್ಟೆ ಉಬ್ಬಿಕೊಳ್ಳುತ್ತದೆಯೇ? ಇದಿಷ್ಟನ್ನು ಪಾಲಿಸಿದರೆ ಸಾಕು ಸಮಸ್ಯೆ ಮಾಯ!

ಕೆಲವರಿಗೆ ಊಟ ಮಾಡಿದ ಕೂಡಲೇ ಹೊಟ್ಟೆ ಬಿರಿದಂತೆ, ಉಬ್ಬಿಕೊಂಡಂತೆ ಮತ್ತು ನೋವಿನ ಅನುಭವವಾಗುತ್ತದೆ. ನೀವು ಮಾಡುವ ಒಂದು ಸಣ್ಣ ತಪ್ಪು ಇದಕ್ಕೆ ಕಾರಣವಾಗಿದೆ. ಆ ತಪ್ಪು ಏನು? ಪರಿಹಾರ ಏನು ಎಂಬುದನ್ನು ತಿಳಿದುಕೊಳ್ಳೋಣ.
ಹೊಟ್ಟೆ ಉಬ್ಬಿಕೊಳ್ಳುವುದನ್ನು ಸಹಿಸಿಕೊಳ್ಳುವುದು ತುಸು ಕಷ್ಟ. ಸಾಮಾನ್ಯವಾಗಿ ಹೊಟ್ಟೆಯಲ್ಲಿ ಗ್ಯಾಸ್ ಹೆಚ್ಚಾದಾಗ ಹೊಟ್ಟೆ ಉಬ್ಬಿರುವಂತೆ ಭಾಸವಾಗುತ್ತದೆ. ಗ್ಯಾಸ್ ಹೆಚ್ಚಾದಾಗ ಹೊಟ್ಟೆಯು ಸಾಮಾನ್ಯಕ್ಕಿಂತ ಸ್ವಲ್ಪ ದೊಡ್ಡದಾಗಿ ಕಾಣುತ್ತದೆ ಮತ್ತು ನೋವು ಉಂಟುಮಾಡುತ್ತದೆ. ದೇಹದಲ್ಲಿ ಹೆಚ್ಚುವರಿ ದ್ರವ ಇದ್ದಾಗಲೂ ಹೊಟ್ಟೆ ಉಬ್ಬುತ್ತದೆ. ಹೊಟ್ಟೆ ತುಂಬಿರುವಾಗ ಊಟವನ್ನು ಬೇಗನೆ ತಿಂದಾಗ ಈ ಸ್ಥಿತಿ ಉಂಟಾಗುತ್ತದೆ. 9 ಗಂಟೆಯ ನಂತರ ಊಟ ಮಾಡಿದರೆ ಅದು ಜೀರ್ಣವಾಗುವುದು ತುಸು ಕಷ್ಟ. ಹೀಗಾಗಿ ಹೊಟ್ಟೆಯ ಮೇಲೆ ಪರಿಣಾಮ ಬೀರುತ್ತದೆ.

ಪರಿಹಾರವೇನು?
* ಊಟದ ನಂತರ ಕೆಲವು ಸೋಂಪು ಬೀಜಗಳನ್ನು ಅಗಿಯಿರಿ.
* ಊಟದ ಒಂದು ಗಂಟೆಯ ನಂತರ ಪುದಿನ ನೀರನ್ನು ಕುಡಿಯಿರಿ.
* ಜೀರಿಗೆ, ಕೊತ್ತಂಬರಿ ಅಥವಾ ಸೋಂಪುಳ್ಳ ಟೀ ಅನ್ನು ಊಟಕ್ಕೂ ಮುಂಚೆ ಅಥವಾ ಊಟದ ನಂತರ ದಿನಕ್ಕೆ ಮೂರು ಬಾರಿ ಸೇವಿಸಿ.
* ಊಟದ ನಂತರ ಬೆಚ್ಚಗಿನ ನೀರಿನಲ್ಲಿ ಅರ್ಧ ಚಮಚ ಕೇರಂಬೀಜ, ಕಲ್ಲು ಉಪ್ಪು ಮತ್ತು ಚಿಟಿಕೆ ಇಂಗು ಸೇರಿಸಿ ಕುಡಿಯುವುದು ಒಳ್ಳೆಯದು.
* ಎಲ್ಲಕ್ಕಿಂತ ಹೆಚ್ಚಾಗಿ ಹಾಗೂ ವಿಶೇಷವಾಗಿ ಊಟದ ಸಮಯದಲ್ಲಿ ಅಥವಾ ನಂತರ ಹೆಚ್ಚು ನೀರು ಕುಡಿಯುವುದನ್ನು ತಪ್ಪಿಸಿ.

ಇದಿಷ್ಟೇ ಅಲ್ಲದೆ, ಒತ್ತಡದಲ್ಲಿ ಮತ್ತು ತರಾತುರಿಯಲ್ಲಿ ಆಹಾರವನ್ನು ಸೇವಿಸುವುದನ್ನು ಎಂದಿಗೂ ಮಾಡಬಾರದು. ಬಿಸಿಯಾದ ಆಹಾರ ತಿನ್ನುವುದು ಉತ್ತಮ. ಏಕೆಂದರೆ, ಬಿಸಿ ಆಹಾರವನ್ನು ಜೀರ್ಣಿಸಿಕೊಳ್ಳಲು ಸುಲಭ. ತಿನ್ನುವಾಗ ಚೆನ್ನಾಗಿ ಅಗಿಯಿರಿ ಮತ್ತು ತ್ವರಿತವಾಗಿ ನುಂಗುವ ಬದಲು ನಿಧಾನವಾಗಿ ನುಂಗಿ. ಐಬಿಎಸ್, ಅಜೀರ್ಣ, ಮಲಬದ್ಧತೆ, ಗ್ಯಾಸ್ಟ್ರಿಕ್ ತೊಂದರೆ, ಹಾರ್ಮೋನ್ ಅಸಮತೋಲನ, ಬೊಜ್ಜು, ಇನ್ಸುಲಿನ್ ಪ್ರತಿರೋಧ, ಮಧುಮೇಹದಂತಹ ಸಮಸ್ಯೆಗಳಿಂದಲೂ ದೀರ್ಘಕಾಲದ ಹೊಟ್ಟೆ ಉಬ್ಬುವಿಕೆ ಉಂಟಾಗಬಹುದು. ನಿದ್ರೆ, ನಿಯಮಿತ ವ್ಯಾಯಾಮ ಮತ್ತು ಒತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಊಟವಾದ 30 ನಿಮಿಷಗಳ ನಂತರ ಒಂದು ಸಣ್ಣ ನಡಿಗೆಯು ಹೊಟ್ಟೆ ಉಬ್ಬುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ, ಶುಂಠಿಯ ತುಂಡನ್ನು ಜಗಿಯುವುದರಿಂದ ಹೊಟ್ಟೆಯಿಂದ ಅನಿಲವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ಕೆಲವು ಜೀರ್ಣಕಾರಿ ಕಿಣ್ವಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ.