



ಡೈಲಿ ವಾರ್ತೆ: 21 ಜುಲೈ 2023


ಬೈಂದೂರು: ಬಾರ್‌ವೊಂದರ ಮುಂಭಾಗ ಪುಡಿ ರೌಡಿಗಳ ಅಟ್ಟಹಾಸ – ವಾಹನದ ಗಾಜು ಹೊಡೆದು ಹಲ್ಲೆ
ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರಿನ ಬಾರ್‌ವೊಂದರ ಮುಂಭಾಗದಲ್ಲಿ ಕಂಠಪೂರ್ತಿ ಕುಡಿದ ಪುಡಿ ರೌಡಿಗಳ ತಂಡವೊಂದು ಅಟ್ಟಹಾಸ ಮೆರೆದಿರುವ ಘಟನೆ ನಡೆದಿದೆ.
ವಾಹನಕ್ಕೆ ಅಡ್ಡ ಬಂದ ಕಾರಣ ಆರಂಭವಾದ ವಾಗ್ವಾದ ಜೋರಾಗಿ ಪರಸ್ಪರ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಟಾಟಾ ಏಸ್ ವಾಹನದಲ್ಲಿದ್ದ ರಮೇಶ್ ದೇವಾಡಿಗ ಹಾಗೂ ರವಿ ಪೂಜಾರಿ ಮೇಲೆ ಪುಡಿ ರೌಡಿಗಳಿಂದ ಹಲ್ಲೆ ನಡೆದಿದೆ.
ಪ್ರಕರಣದ ದೃಶೃಗಳು ಬಾರ್ ಮುಂಭಾಗದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರೌಡಿಗಳ ತಂಡ ಅಲ್ಲೇ ಪಾರ್ಕಿಂಗ್ ಮಾಡಿದ್ದ ವಾಹನದ ಗಾಜನ್ನು ಹೆಲ್ಮೆಟ್ ಹಾಗೂ ಸೋಡಾ ಬಾಟಲಿಯಿಂದ ಜಖಂಗೊಳಿಸಿದ್ದಾರೆ. ಘಟನಾ ಸ್ಥಳಕ್ಕೆ ಬೈಂದೂರು ಪೊಲೀಸರು ಆಗಮಿಸುತ್ತಿದ್ದಂತೆ ರೌಡಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.