ಡೈಲಿ ವಾರ್ತೆ:22 ಜುಲೈ 2023
ಕೋಟ: ಬೇಲಿ ವಿವಾದ – ಕೊಲೆ ಬೆದರಿಕೆ : ಮೂವರ ವಿರುದ್ಧ ಪ್ರಕರಣ ದಾಖಲು!
ಕೋಟ:ಕುಂದಾಪುರ ತಾಲೂಕಿನ ಬೇಳೂರು ಗ್ರಾಮದಲ್ಲಿ ಪ್ಲಾಟಿಂಗ್ ಆದ ಪಟ್ಟಾ ಜಮೀನಿಗೆ ಬೇಲಿ ಹಾಕುತ್ತಿರುವಾಗ ಪಕ್ಕದ ಜಮೀನಿನವರು ಆಕ್ಷೇಪ ಮಾಡಿ, ಬೇಲಿ ಹಾಕಿಸುತ್ತಿದ್ದ ಸ್ಥಳದವರಿಗೆ ಅವಾಚ್ಯವಾಗಿ ಬೈದು, ಕೊಲೆ ಬೆದರಿಕೆ ಒಡ್ಡಿರುವ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಈ ಬಗ್ಗೆ ಸಂಬಂಧಿಸಿದವರು ಕೋಟ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ದೂರಿನಲ್ಲಿ ವಿವರಿಸಲಾದಂತೆ ಪ್ರಕರಣದ ವಿವರ ಇಂತಿದೆ : ಬೇಳೂರು ಗ್ರಾಮದ ದೇವಸ್ಥಾನ ಬೆಟ್ಟು ನಿವಾಸಿ ವಾಸುದೇವ ಬಾಯಿರಿ ಎಂಬವರು ತಮ್ಮ ಸರ್ವೇ ನಂಬ್ರ 64/3 ರಲ್ಲಿನ ತಮ್ಮ ಒಡೆತನದ 60 ಸೆಂಟ್ಸ್ ಸ್ಥಳಕ್ಕೆ ಶುಕ್ರವಾರ ಬೆಳಿಗ್ಗೆ ಕಲ್ಲು ಕಂಬಗಳನ್ನು ನೆಟ್ಟು ಬೇಲಿ ಹಾಕಿಸುತ್ತಿದ್ದರು. ಸ್ಥಳೀಯ ಕಾರ್ಮಿಕ ಪ್ರಶಾಂತ ಎಂಬವರು ಕೆಲಸ ನಿರ್ವಹಿಸುತ್ತಿದ್ದರು.
ಈ ವೇಳೆ ಸ್ಥಳೀಯರೇ ಆದ ರಾಜೇಂದ್ರ ಶೆಟ್ಟಿ, ಕರುಣಾಕರ ಶೆಟ್ಟಿ ಮತ್ತು ಜಯಶೀಲ ಶೆಟ್ಟಿ ಎಂಬ ಮೂವರು ಆ ಸ್ಥಳಕ್ಕೆ ಅಕ್ರಮ ಪ್ರವೇಶಗೈದು, ಪಕ್ಕದಲ್ಲೇ ತಮ್ಮ ಸ್ಥಳವಿದೆ ಎಂದು ಅಬ್ಬರಿಸುತ್ತಾ ಏಕಾಏಕಿ ಬೇಲಿಗಾಗಿ ನೆಟ್ಟಿರುವ ಎಲ್ಲಾ ಕಲ್ಲು ಕಂಬಗಳನ್ನೂ ಅಲ್ಲಾಡಿಸಿ ಕಿತ್ತು ಹಾಕಿರುತ್ತಾರೆ. ಮಾತ್ರವಲ್ಲ, ಕೆಲವಷ್ಟು ಕಂಬಗಳನ್ನು ಒಡೆದುಹಾಕಿ, ವಾಸುದೇವ ಬಾಯಿರಿ, ಅವರ ಪತ್ನಿ ರೂಪಾ ಬಾಯಿರಿಯವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಇನ್ನು ಬೇಲಿ ಮಾಡಿದರೆ, ಎಲ್ಲರನ್ನೂ ಕೊಂದು ಹಾಕುವುದಾಗಿ ಬೆದರಿಕೆ ಒಡ್ಡಿದರು ಎನ್ನಲಾಗಿದೆ.
ಈ ವೇಳೆ ಬಾಯಿರಿಯವರ ಸಹೋದರ ರಾಮಕೃಷ್ಣ ಬಾಯಿರಿ ಬಂದು ಗಲಾಟೆ ಮಾಡಬೇಡಿ ಎಂದು ಸಮಾಧಾನಿಸಲು ಯತ್ನಿಸಿದರೂ ಆರೋಪಿಗಳು ರೌಡಿಗಳಂತೆ ವರ್ತಿಸಿ, ಭಯವನ್ನುಂಟುಮಾಡಿದ್ದಾರೆ ಎನ್ನಲಾಗಿದೆ. ಆರೋಪಿಗಳ ಅಟ್ಟಹಾಸದ ಕೃತ್ಯಗಳನ್ನು ಫೋಟೋ ತೆಗೆಯುವಾಗ, ಬೇಕಾದಷ್ಟು ಫೋಟೋ ತೆಗೆದುಕೊಳ್ಳಿ ಎಂದು ವ್ಯಂಗ್ಯವಾಡುತ್ತಾ ಎಲ್ಲಾ ಕಂಬಗಳನ್ನೂ ಕಿತ್ತು ಹಾಕಿದರು. ಘಟನೆಯನ್ನು ವೀಕ್ಷಿಸಿದರೆ, ಆರೋಪಿಗಳಿಗೆ, ತಾವು ಬಲಾಡ್ಯರು, ಕಾನೂನು ಅಥವಾ ಪೊಲೀಸರು ತಮಗೆನೂ ಮಾಡಲಾಗದು ಎಂಬ ಭಾವನೆ ಇರುವುದು ವ್ಯಕ್ತವಾಗುತ್ತದೆ.
ದೂರು ಸ್ವೀಕರಿಸಿದ ಕೋಟ ಪೊಲೀಸರು, ಆರೋಪಿಗಳಾದ ರಾಜೇಂದ್ರ ಶೆಟ್ಟಿ, ಕರುಣಾಕರ ಶೆಟ್ಟಿ ಮತ್ತು ಜಯಶೀಲ ಶೆಟ್ಟಿ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 447, 427, 504, 506 r/w 34ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.