ಡೈಲಿ ವಾರ್ತೆ: 22 ಜುಲೈ 2023

ಬಂಟ್ವಾಳ : ಬೆಂಗಳೂರಿನಲ್ಲಿ ಕಳವಾಗಿದ್ದ ಬೈಕ್ ಬಂಟ್ವಾಳದಲ್ಲಿ ಪತ್ತೆ!

ಬಂಟ್ವಾಳ : ಬೆಂಗಳೂರಿನಲ್ಲಿ ಕಳವಾಗಿದ್ದ ಬೈಕ್ ಬಂಟ್ವಾಳದಲ್ಲಿ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ಬಂಟ್ವಾಳ ಸಂಚಾರಿ ಠಾಣಾಧಿಕಾರಿ ಸುತೇಶ್ ಅವರ ನೇತ್ರತ್ವದ ಪೋಲೀಸ್ ತಂಡ ಫರಂಗಿಪೇಟೆಯಲ್ಲಿ ವಾಹನ ತಪಾಸಣಾ ನಡೆಸುತ್ತಿರುವ ವೇಳೆ ಡ್ಯೂಕ್ ಬೈಕಿನಲ್ಲಿ ಬರುತ್ತಿದ್ದ ಸವಾರನನ್ನು ತಪಾಸಣೆ ಮಾಡುವ ಉದ್ದೇಶದಿಂದ ನಿಲ್ಲಿಸಲು ಸೂಚಿಸಿದಾಗ ಆತ ಬೈಕ್ ಬಿಟ್ಟು ಪರಾರಿಯಾಗಿದ್ದಾನೆ. ಬಳಿಕ ಬೈಕ್ ನ್ನು ವಶಪಡಿಸಿಕೊಂಡ ಪೊಲೀಸರು ಬೈಕಿನ ಬಗ್ಗೆ ತಪಾಸಣೆ ನಡೆಸಿದಾಗ ಬೈಕಿನ ಮೂಲ ವಾಹನ ಸಂಖ್ಯೆಯನ್ನು ಬದಲಾಯಿಸ ಲಾಗಿತ್ತು. ವಾಹನದ ಇಂಜಿನ್ ಸಂಖ್ಯೆಯ ಆಧಾರದ ಮೇಲೆ ಪರಿಶೀಲನೆ ನಡೆಸಿದಾಗ ಇದು ಕಳವಾದ ಬೈಕ್ ಎಂಬುದನ್ನು ಖಚಿತ ಪಡಿಸಿಕೊಂಡರು.

2021 ರಲ್ಲಿ ಬೆಂಗಳೂರಿನಲ್ಲಿ ಈ ಬೈಕ್ ಕಳವಾಗಿರುವ ಮಾಹಿತಿ ಪಡೆದ ಪೋಲೀಸರು ಬೈಕನ್ನು ಸದ್ಯ ತಮ್ಮ ವಶಕದಲ್ಲಿರಿಸಿಕೊಂಡಿದ್ದು,
ಬೆಂಗಳೂರು ಪೊಲೀಸರಿಗೆ ಹಸ್ತಾಂತರ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.