ಡೈಲಿ ವಾರ್ತೆ:23 ಜುಲೈ 2023

ವರದಿ: ವಿದ್ಯಾಧರ ಮೊರಬಾ

ಅಂಕೋಲಾ: ಭಾರೀ ಗಾಳಿ ಮಳೆಗೆ ಧರಾಶಾಯಿಯಾದ 200 ವರ್ಷ ಹಳೆಯ ಬೃಹತ್ ಆಲದ ಮರ – ಲಕ್ಷಾಂತರ ರೂ. ನಷ್ಟ!


ಅಂಕೋಲಾ : ಇಲ್ಲಿನ ಪುರಸಭೆಯ ವ್ಯಾಪ್ತಿಯ ಹನುಮಟ್ಟಾದ ಶ್ರೀ ಲಕ್ಷ್ಮೀ‌ನಾರಾಯಣ ಮಹಾಮಾಯ ದೇವಸ್ಥಾನದ ಹಿಂಭಾಗದಲ್ಲಿದ್ದ ಬೃಹತ್ ಆಲದ ಮರವೊಂದು ಬುಡಸಮೇತ ಧರಾಶಾಯಿಯಾದ ಘಟನೆ ರವಿವಾರ ಸಂಜೆಯ ವೇಳೆಗೆ ನಡೆದಿದೆ. ಸುಮಾರ 200 ವರ್ಷ ಹಳೆಯ ಮರ ಇದಾಗಿದ್ದು ಹತ್ತಿರದ ರವೀಂದ್ರ ಫಾತರಫೇಕರ ಎಂಬುವರ ಮನೆಯ ಆವರಣದಲ್ಲಿ ಬಿದ್ದಿದೆ.

ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮರ ಬಿದ್ದಿದ್ದು ಬೀಳುವಾಗ ಎರಡು ವಿದ್ಯುತ್ ಖಂಬಗಳು, ದೇವಸ್ಥಾನದ ಕಂಪೌಂಡ ಗೋಡೆ ಹಾಗೂ ಹತ್ತಿರದ ರವೀಂದ್ರ ಫಾತರಫೇಕರ ಅವರ ಮನೆಗೂ ಸ್ವಲ್ಪ ಹಾನಿಯಾಗಿದೆ. ಅಲ್ಲದೆ ಅದೇ ಮನೆಯಲ್ಲಿ ಬಾಡಿಗೆಗಿದ್ದ ಸುಂದರ ರಾಜ ಎನ್ನುವವರ ಬೈಕ್ ಹಾಗೂ ಇನ್ನೊಂದು ಬೈಕ್ ಜಖಂಗೊಂಡಿದ್ದು ಮಹಾಮಾಯ ದೇವಸ್ಥಾನದ ಪರಿವಾರ ದೇವರಾದ ಬಾರಾಗಣ ದೇವಸ್ಥಾನಕ್ಕೂ ಹಾನಿಯಾಗಿದೆ. ವಿದ್ಯುತ್ ಕಂಬ ನೆಲಕ್ಕುರುಳಿದ ಪರಿಣಾಮ ಸುಮಾರು ಹದಿನೈದು ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮರ ಬಿದ್ದು ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಸ್ಥಳದಲ್ಲಿ ಪುರಸಭೆಯ ಮಾಜಿ ಉಪಾಧ್ಯಕ್ಷೆ ರೇಖಾ ಗಾಂವಕರ, ನಾಗೇಶ ನಾಯ್ಕ, ಮಹಾದೇವ ನಾಯ್ಕ, ತುಕಾರಾಮ ಗಾಂವಕರ ಸೇರಿದಂತೆ ಹಲವಾರು ಊರ ಮಹನೀಯರು ಸ್ಥಳಕ್ಕಾಗಮಿಸಿದರು.