ಡೈಲಿ ವಾರ್ತೆ:23 ಜುಲೈ 2023

ಬಂಟ್ವಾಳ : ನೇತ್ರಾವತಿ ನೀರಿನ ಮಟ್ಟ ಹೆಚ್ಚಳ, ವಿವಿದೆಡೆ ಮಳೆ ಹಾನಿ, ನೆರೆಪೀಡಿತ ಪ್ರದೇಶಗಳಿಗೆ ಸಹಾಯಕ ಆಯುಕ್ತರು ಬೇಟಿ

ಬಂಟ್ವಾಳ : ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಭಾರೀ ಪ್ರಮಾಣದಲ್ಲಿ ಗಾಳಿ ಮಳೆಯಾಗುತ್ತಿದ್ದು, ತಾಲೂಕಿನ ವಿವಿಧೆಡೆ ಮನೆ ಹಾನಿ ಪ್ರಕರಣಗಳು ಸಂಭವಿಸಿದ ಬಗ್ಗೆ ವರದಿಯಾಗಿದೆ.

ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ನದಿ ನೀರಿನ ಮಟ್ಟ ಭಾನುವಾರ 6.9 ಮೀಟರ್ ಗೆ ಏರಿಕೆಯಾಗಿದೆ. ನೀರಿನ ಮಟ್ಟ ನಿಧಾನವಾಗಿ ಏರಿಕೆಯಾಗುತ್ತಿದ್ದು, ನದಿ ತೀರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

ತಾಲೂಕಿನ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಆಲಡ್ಕದ ಸುಮಾರು 9 ಮನೆಗೆ ನೀರು ನುಗ್ಗಿದೆ. ಶಾರದ ವಿದ್ಯಾಲಯದ ಆಟದ ಮೈದಾನ ಹಾಗೂ ಅಲ್ಲೇ ಸಮೀಪವಿರುವ ಅಡಿಕೆ ಕೃಷಿಗಳಿಗೆ ನೀರು ನುಗ್ಗಿ ಅಪಾರ ನಷ್ಟ ಸಂಭವಿಸಿದೆ.

ಮಂಗಳೂರು ಸಹಾಯಕ ಆಯುಕ್ತ ಡಾ. ಹರ್ಷವರ್ಧನ ಅವರು ನೆರೆಪೀಡಿತ ಪ್ರದೇಶಗಳಾದ ಪಾಣೆಮಂಗಳೂರು ಗ್ರಾಮದ ಆಲಡ್ಕ ಪಡ್ಪು, ಬಿ.ಮೂಡ ಗ್ರಾಮದ ಬಸ್ತಿಪಡ್ಪು ಬಂಟ್ವಾಳದ ಮಣಿಹಳ್ಳ, ಮೈಂದಾಳ ಹಾಗೂ ಇನ್ನಿತರ ಮುಳುಗಡೆ ಪ್ರದೇಶಗಳಿಗೆ ಭೇಟಿ ನೀಡಿದರು ಹಾಗೂ ನೇತ್ರಾವತಿ ನದಿಯ ನೀರಿನ ಮಟ್ಟ ಪರಿಶೀಲಿಸಿದರು.

ಪ್ರವಾಹ ಪೀಡಿತ ಪ್ರದೇಶದಲ್ಲಿ ವಾಸಿಸುತ್ತಿರುವ ಮನೆಯವರಿಗೆ ಕಾಳಜಿ ಕೇಂದ್ರಕ್ಕೆ ಸ್ಥಳಾಂತರವಾಗಲು ಸೂಚಿಸಿದರು ಮತ್ತು ಪಾಣೆ ಮಂಗಳೂರು ಗ್ರಾಮದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿನೆ ನಡೆಸಿದರು.

ಈ‌ ಸಂದರ್ಭದಲ್ಲಿ ಬಂಟ್ವಾಳ ತಹಶೀಲ್ದಾರ್ ಎಸ್.ಬಿ.ಕೂಡಲಗಿ ಉಪ ತಹಸೀಲ್ದಾರ್ ರಾಜೇಶ್ ನಾಯ್ಕ್, ಕಂದಾಯ ನಿರೀಕ್ಷಕ ವಿಜಯ್.ಆರ್‌, ಗ್ರಾಮ ಆಡಳಿತ ಆಧಿಕಾರಿ ಮತ್ತಿಹಳ್ಳಿ ಪ್ರಕಾಶ್, ಅಶ್ವಿನಿ, ಸಿಬ್ಬಂದಿಗಳಾದ ಸದಾಶಿವ ಕೈಕಂಬ, ಯಶೋಧ, ಶಿವಪ್ರಸಾದ್, ಸಂದೇಶ್ ಹಾಜರಿದ್ದರು.

ವಿವಿಧೆಡೆ ಮಳೆ ಹಾನಿ.
ಅಳಿಕೆ ಗ್ರಾಮದ ಕೊಡಿಜಾಲು ರಾಮ ಬೆಲ್ಚಡ, ವದ್ವ ಗೋಪಾಲ ಕೃಷ್ಣ ನಾವುಡ , ಸಾಲೆತ್ತೂರು ಗ್ರಾಮದ ಬೊಳ್ಮಾರ್ ನಿವಾಸಿ ಕಮಲ, ವಿಟ್ಲ ಕಸಬಾ ಗ್ರಾಮದ ಅವೆತ್ತಿಕಲ್ಲು ನಿವಾಸಿ ಚಂದ್ರಶೇಖರ, ದೇವಸ್ಯಪಡೂರು ಗ್ರಾಮದ ಮಾಲಬೆ ನಿವಾಸಿ ಪುಷ್ಪ ಕೋಂ ರಾಜೇಶ್, ಕಡೇಶ್ವಾಲ್ಯ ಗ್ರಾಮದ ವೆಂಕಪ್ಪ ಬಿನ್ ಮೋಹನ ಮೂಲ್ಯ , ಬಿ.ಮೂಡ ಗ್ರಾಮದ ಬೀಪಾತುಮ್ಮ ಎಂಬವರ ಮನೆಗಳಿಗೆ ಮರ ಬಿದ್ದು ಭಾಗಶಃ ಹಾನಿಯಾಗಿರುತ್ತದೆ ಆದರೆ ಯಾವುದೇ ಜೀವಹಾನಿಯಾಗಿಲ್ಲ.

ಬಾಳ್ತಿಲ ಗ್ರಾಮದ ಅರಿಮಜಲು ಎಂಬಲ್ಲಿ ಸುಂದರಿ, ಹಾಗೂ ಮೂಡು ಪಡಕೊಡಿ ಗ್ರಾಮದ ಸೇವಾ ಎಂಬಲ್ಲಿನ ವಿನುತಾ ಕೋಂ ರವೀಂದ್ರ ಪೂಜಾರಿ ಅವರ ವಾಸ್ತವ್ಯದ ಮನೆಗೆ ಗುಡ್ಡಜರಿದು ಮನೆಗೆ ಭಾಗಶಃ ಹಾನಿಯಾಗಿರುತ್ತದೆ.