ಡೈಲಿ ವಾರ್ತೆ: 24 ಜುಲೈ 2023
ಕೋಟತಟ್ಟು ಗ್ರಾಮ ಪಂಚಾಯಿತಿ ಕೆಡಿಪಿ ಸಭೆ: ಸಮಸ್ಯೆಗಳ ಪರಿಹಾರಕ್ಕೆ ಕ್ರಮ, ಬೇಡಿಕೆ ಈಡೇರಿಸುವಂತೆ ಆಗ್ರಹ!
ಕೋಟ:ಹೋಬಳಿ, ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾಮಟ್ಟದ ಆಯ್ದ ಅಧಿಕಾರಿಗಳು ಬಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತಮ್ಮ ತಮ್ಮ ಇಲಾಖೆಯಿಂದಾದ ಅಭಿವೃದ್ಧಿ ಕಾಮಗಾರಿಗಳು ಮತ್ತು ಕುಂದು ಕೊರತೆಗಳನ್ನು ತಿಳಿಸಿದಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯ. ಇದರಿಂದ ಗ್ರಾಮದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕೋಟತಟ್ಟು ಗ್ರಾಮದ ಕೋಟ ಕಾರಂತ ಥೀಂ ಪಾರ್ಕ್ ನ ಮಿನಿ ಸಭಾ ಭವನದಲ್ಲಿ ಜು.24 ರಂದು ಸೋಮವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನೆ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.
ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ ದಿನೇಶ್ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭ ಶಾಸಕ ಕಿರಣ್ ಕೊಡ್ಗಿ ಅವರನ್ನು ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು.
ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಅಭಿವೃದ್ಧಿ ವರದಿಯನ್ನು ಮಂಡಿಸಿ, ಕುಂದು ಕೊರತೆಗಳ ಬಗ್ಗೆ ಮಾಹಿತಿ ನೀಡಿದರು.
ಪ್ರಮುಖವಾಗಿ ಪಂಚಾಯಿತಿ ವ್ಯಾಪ್ತಿಯಲ್ಲಿ ಜಲಜೀವನ್ ಯೋಜನೆಯಡಿ 420 ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ದಾನಗುಂದು ಅಂಗನವಾಡಿ ಶಾಲೆಗೆ ಶಾಲಾ ಅವಧಿಯಲ್ಲಿ ಕುಡಿಯುವ ನೀರು ಬರುತ್ತಿಲ್ಲ. ಇದಕ್ಕೆ ಪರಿಹಾರ ನೀಡುವಂತೆ ಅಂಗನವಾಡಿ ಶಿಕ್ಷಕಿ ಮನವಿ ಮಾಡಿದರು. ಕೋಟ ವ್ಯಾಪ್ತಿಯ ಆರೋಗ್ಯ ಇಲಾಖೆಯ ಉಪಕೇಂದ್ರಗಳಲ್ಲಿ ಸಿಬ್ಬಂದಿಗಳ ಕೊರತೆ ನೀಗಿಸುವಂತೆ, ಶಾಲಾ ಮಕ್ಕಳಿಗೆ ತಿಂಗಳಿಗೊಮ್ಮೆ ನೀಡುತ್ತಿರುವ ಮೊಟ್ಟೆಯನ್ನು ವಾರಕ್ಕೊಮ್ಮೆ ನೀಡುವ ಬಗ್ಗೆ ಶಾಸಕರ ಮುಖಾಂತರ ಮನವಿ ನೀಡುವ ಬಗ್ಗೆ, ಪಶು ಸಂಗೋಪನೆ ಇಲಾಖೆಯಲ್ಲಿರುವ ವೈದ್ಯಾಧಿಕಾರಿಗಳ ಕೊರತೆ, ಬೀದಿ ನಾಯಿ ಸಂತಾನ ನಿಯಂತ್ರಣ, ಗ್ರಂಥಾಲಯಕ್ಕೆ ಚೆಸ್ ಬೋರ್ಡ್, ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗುವಂತೆ ಮಾಸಿಕ ಪುಸ್ತಕ, ಸ್ಥಳೀಯ ಪ್ರಾಥಮಿಕ, ಪ್ರೌಢ ಮತ್ತು ಪಿಯು ಹಂತದ ಶಾಲಾ ಕಟ್ಟಡ, ಇಂಗು ಗುಂಡಿ ಸಮಸ್ಯೆ, ಶೌಚಾಲಯ, ಮಳೆ ನೀರು ಕೊಯ್ಲು ಸಮಸ್ಯೆ, ಸೈಕಲ್ ಸ್ಟ್ಯಾಂಡ್ ಕೊರತೆಗಳ ಬಗ್ಗೆ ಸಭೆಯಲ್ಲಿ ಗಮನ ಸೆಳೆಯಲಾಯಿತು.
ಸಮಸ್ಯೆಗಳ ಪರಿಹಾರಕ್ಕೆ ಕ್ರಮ ತೆಗೆದುಕೊಂಡು, ಸಬೆಗೆ ಗೈರು ಹಾಜರಾದ ವಿವಿಧ ಇಲಾಖೆಯ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ನಿರ್ಣಯಿಸಲಾಯಿತು. ಕುಂದಾಪುರ ಶಾಸಕ ಕಿರಣ್ ಕೊಡ್ಗಿ, ಪಂಚಾಯಿತಿ ಉಪಾಧ್ಯಕ್ಷ ವಾಸು ಪೂಜಾರಿ, ಸಾಮಾಜಿಕ ನ್ಯಾಯ ಸಮಿತಿಯ ಸದಸ್ಯೆ ಸೀತಾ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು. ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.