ಡೈಲಿ ವಾರ್ತೆ: 25 ಜುಲೈ 2023
ರಾಜ್ಯದಲ್ಲಿ ಎರಡು ಪ್ರತ್ಯೇಕ ಘಟನೆ: ಭಾರೀ ಮಳೆಗೆ ಮನೆಗಳ ಗೋಡೆ ಕುಸಿತ – 2 ಕಂದಮ್ಮಗಳ ದಾರುಣ ಸಾವು
ದಾವಣಗೆರೆ/ಹಾವೇರಿ: ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಎರಡು ಪ್ರತ್ಯೇಕ ಕಡೆಗಳಲ್ಲಿ ಮನೆಗಳ ಗೋಡೆ ಕುಸಿದು ಎಳೆ ಕಂದಮ್ಮಗಳು ದಾರುಣ ಸಾವಿಗೀಡಾಗಿರುವ ಘಟನೆ ದಾವಣಗೆರೆ, ಹಾವೇರಿಯಲ್ಲಿ ನಡೆದಿದೆ.
ಮನೆಯೊಂದರ ಗೋಡೆ ಕುಸಿದ ಪರಿಣಾಮ 1 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕುಂಬಳೂರಿನಲ್ಲಿ ನಡೆದಿದೆ. ಕುಂಬಳೂರಿನ ಲಕ್ಷ್ಮಿ ಹಾಗೂ ಕೆಂಚಪ್ಪ ದಂಪತಿಯ ಪುತ್ರಿ ಸ್ಪೂರ್ತಿ ಮನೆಯ ಗೋಡೆ ಕುಸಿದು ಅದರಡಿ ಸಿಲುಕಿ ದಾರುಣ ಅಂತ್ಯ ಕಂಡ ಕಂದಮ್ಮ. ಕಳೆದ 4-5 ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮನೆಯ ಗೋಡೆ ಕುಸಿದಿದೆ. ತಂದೆ-ತಾಯಿ ಜೊತೆ ಮಲಗಿದ್ದ ಬಾಲಕಿ ಮೇಲೆ ಗೋಡೆ ಬಿದ್ದ ಪರಿಣಾಮ ಬಾಲಕಿ ಸಾವನ್ನಪ್ಪಿದ್ದಾಳೆ.
ಘಟನೆಯಲ್ಲಿ ಬಾಲಕಿಯ ತಂದೆ-ತಾಯಿಗೂ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗೆ ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುಟ್ಟ ಕಂದಮ್ಮನ ಅಗಲಿಕೆಯಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮಲೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇನ್ನು ಹಾವೇರಿಯಲ್ಲೂ ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ಮನೆಯ ಗೋಡೆ ಕುಸಿದು 3 ವರ್ಷದ ಬಾಲಕಿ ಮೃತಪಟ್ಟ ಘಟನೆ ಮಾಳಾಪುರ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಭಾಗ್ಯ ಚಳಮರದ ಎಂದು ಗುರುತಿಸಲಾಗಿದೆ. ಮನೆಯಲ್ಲಿದ್ದ ಮತ್ತೊಂದು ಮಗುವಿಗೂ ಗಾಯವಾಗಿದೆ.
2 ದಿನಗಳ ಹಿಂದೆ ನಿರಂತರ ಮಳೆಯಿಂದ ಮನೆಯ ಗೋಡೆ ಕುಸಿದು ಬಿದ್ದಿತ್ತು. ಘಟನೆಯಲ್ಲಿ 3 ವರ್ಷದ ಬಾಲಕಿ ಭಾಗ್ಯ ಗಂಭೀರವಾಗಿ ಗಾಯಗೊಂಡಿದ್ದಳು. ತಕ್ಷಣವೆ ಆಕೆಗೆ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬಾಲಕಿ ಮೃತಪಟ್ಟಿದ್ದಾಳೆ.
ಬಾಲಕಿಯ ಸಾವಿನಿಂದ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಪುಟ್ಟ ಬಾಲಕಿಯ ಸಾವಿಗೆ ಗ್ರಾಮದ ಜನರು ಸಹ ಕಣ್ಣೀರಾಗಿದ್ದಾರೆ.