ಡೈಲಿ ವಾರ್ತೆ:31 ಜುಲೈ 2023
ಉಡುಪಿ ಪ್ರತಿಭಟನೆಯಲ್ಲಿ ಭಾಗಿಯಾದ ವಿದ್ಯಾರ್ಥಿನಿಗೆ ಅಶ್ಲೀಲ ಮೆಸೇಜ್, ಬೆದರಿಕೆ!
ಉಡುಪಿ: ಟಾಯ್ಲೆಟ್ ವಿಡಿಯೋ ಚಿತ್ರೀಕರಣ ಘಟನೆಯನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿ ಹೇಳಿಕೆ ನೀಡಿದ್ದ ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶಗಳು ಬಂದಿದೆ.
ಪ್ರತಿಭಟನೆಯ ವೇಳೆ ವಿದ್ಯಾರ್ಥಿನಿ ನೇತ್ರಜ್ಯೋತಿ ಕಾಲೇಜಿನ ಅವ್ಯವಸ್ಥೆ ವಿರುದ್ಧ ಮಾತನಾಡಿದ್ದರು. ಪ್ರತಿಭಟನೆಯಲ್ಲಿ ಭಾಗಿಯಾದ ನಂತರ ಜುಲೈ 28 ರಂದು ಜಿಗರ್ ಕೋಬ್ರಾ ಹೆಸರಿನ ಖಾತೆಯಿಂದ ವಿದ್ಯಾರ್ಥಿನಿಯ ಇನ್‌ಸ್ಟಾ ಖಾತೆಗೆ ಭಯಪಡಿಸುವ ರೀತಿಯ ಮೆಸೇಜ್ ಬರಲು ಆರಂಭವಾಗಿದೆ.
ಮಾನಸಿಕ ನೆಮ್ಮದಿಗೆ ಭಂಗ ಉಂಟು ಮಾಡಲಾಗಿದೆ ಎಂದು ವಿದ್ಯಾರ್ಥಿನಿ ಹೇಳಿದ ಹಿನ್ನೆಲೆಯಲ್ಲಿ ಈ ಸಂದೇಶದ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಹಿಂದೂ ಸಂಘಟನೆಗಳು ಮಾಹಿತಿ ನೀಡಿದ್ದವು. ಕೇಂದ್ರ ಸಚಿವೆ ಮತ್ತು ಎಸ್‍ಪಿ ಸಮಾಲೋಚನೆ ಬಳಿಕ ಈಗ ಪ್ರಕರಣ ದಾಖಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಆರು ತಿಂಗಳ ಕಾಲೇಜಿನ ಡಿವಿಆರ್ ವಶಕ್ಕೆ ಪಡೆದು ಪರಿಶೀಲನೆ ನಡೆಸಲು ಪೊಲೀಸ್ ಇಲಾಖೆ ಮುಂದಾಗಿದೆ. ವಿದ್ಯಾರ್ಥಿನಿಯರು ಹಾಗೂ ಪರಿಸರದಲ್ಲಿ ಆಪರೇಟ್ ಆದ ಮೊಬೈಲ್‌ಗಳ ಸಿಡಿಆರ್ ಪರಿಶೀಲನೆ ನಡೆಯುವ ಸಾಧ್ಯತೆಯಿದೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ವಿಡಿಯೋ ಪತ್ತೆಯಾದ ನಂತರ ಸಮಗ್ರ ವಿಚಾರಣೆ ನಡೆಯಲಿದೆ.
ಆರೋಪಿತ ವಿದ್ಯಾರ್ಥಿನಿಯರ ಜೊತೆ ಮಾತನಾಡಲು ಹಲವು ಯುವಕರು ಕಾಲೇಜಿಗೆ ಬರುತ್ತಿದ್ದರು. ಇದು ತಮಾಷೆಗೆ ಮಾಡಿದ ವಿಡಿಯೋ ಅಲ್ಲ. ಇದು ಉದ್ದೇಶಪೂರ್ವಕ ಕೃತ್ಯ. ಹೀಗಾಗಿ ಕಾಲೇಜಿನ ಸಿಸಿಟಿವಿಗಳನ್ನು ಪರಿಶೀಲಿಸಬೇಕೆಂದು ಬಿಜೆಪಿ ನಾಯಕರು ಆಗ್ರಹಿಸಿದ್ದರು.