ಡೈಲಿ ವಾರ್ತೆ:02 ಆಗಸ್ಟ್ 2023

ದಲಿತ ಬಾಲಕಿಯ ಸರಣಿ ಹಾಗೂ ಸಾಮೂಹಿಕ ಅತ್ಯಾಚಾರ, ಅನೈತಿಕ ಪೊಲೀಸ್ ಗಿರಿ, ಗೂಂಡಾಗಿರಿ ಖಂಡನೀಯ, ಬಿ.ರಮಾನಾಥ ರೈ.

ಬಂಟ್ವಾಳ : ತಾಲೂಕಿನ ವಿಟ್ಲದಲ್ಲಿ ದಲಿತ ಬಾಲಕಿಯ ಸರಣಿ ಹಾಗೂ ಸಾಮೂಹಿಕ ಅತ್ಯಾಚಾರ, ಬಂಟ್ವಾಳದಲ್ಲಿ ಪೊಲೀಸ್ ಸಿಬ್ಬಂದಿಯ ಕುಟುಂಬದ ಮೇಲೆ ಅನೈತಿಕ ಗೂಂಡಾಗಿರಿ,
ಮಂಗಳೂರಿನಲ್ಲಿ ಮಾಧ್ಯಮ ಮಿತ್ರನ ಮೇಲೆ ಗೂಂಡಾಗಿರಿ ಮೆರೆದವರ ಬಗ್ಗೆ ಜಿಲ್ಲೆಯ ಬಿಜೆಪಿ ಶಾಸಕರು, ಸಂಸದರು, ನಾಯಕರು ತಮ್ಮ ಅಭಿಪ್ರಾಯವನ್ನು ಏಕೆ ವ್ಯಕ್ತಪಡಿಸುತ್ತಿಲ್ಲ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ ಪ್ರಶ್ನಿಸಿದರು.

ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಷ್ಟ್ರ ಭಕ್ತಿಯ ಬಗ್ಗೆ ಮಾತನಾಡುವ, ಮಾತೆತ್ತಿದರೆ ಮಾತೆ, ದೇಶಪ್ರೇಮ ಎಂದು ಬೊಗಳೆ ಬಿಡುವ ಬಿಜೆಪಿಗರು ಈ ಎಲ್ಲಾ ಕೃತ್ಕಗಳನ್ನು ಎಸಗಿದ ಆರೋಪಿಗಳನ್ನು ಬೆಂಬಲಿಸುತ್ತಿರುವುದು ಖಂಡನೀಯ ಎಂದರು .

ಪುತ್ತೂರಿನ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿಯನ್ನು ಅದೇ ಕಾಲೇಜಿನ ಎಬಿವಿಪಿ ಸಂಘಟನೆಗೆ ಸೇರಿದ ವಿದ್ಯಾರ್ಥಿಗಳು ವಾಹನದಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿ ಉದ್ದೇಶ ಪೂರ್ವಕವಾಗಿ ವೀಡಿಯೋ ಚಿತ್ರೀಕರಣ ನಡೆಸಿ ವೈರಲ್ ಮಾಡಿದ ಘಟನೆ ನಡೆಯಿತು. ಈ ಎಲ್ಲ ಘಟನೆಗಳ ಹಿಂದೆಯೂ ಬ್ಲ್ಯಾಕ್ ಮೇಲ್ ತಂತ್ರಗಾರಿಕೆ ಇದೆ. ಹೆಣ್ಣು ಮಕ್ಕಳನ್ನು ಆಶ್ಲೀಲವಾಗಿ ಅನೈತಿಕವಾಗಿ ಲೈಂಗಿಕವಾಗಿ ಬಳಸಿಕೊಳ್ಳುವ ಮೂಲಕ ನೀಚ ಕೃತ್ಯ ಎಸಗುವವರ ಸಂಘ ಪರಿವಾರದ ಕಾರ್ಯಕರ್ತರ ವಿರುದ್ದ ಎಂದಿಗೂ ಬಿಜೆಪಿಗರು ತುಟಿ ಬಿಚ್ಚಿಲ್ಲ. ಅದೇ ಜಾಗದಲ್ಲಿ ಇತರರಿಂದ ಕೃತ್ಯ ನಡೆದರೆ ಮಾತ್ರ ಮಾತಾ ಪ್ರೇಮ, ದೇಶಪ್ರೇಮ ಉಕ್ಕಿ ಬರುತ್ತಿರುವುದರ ಹಿಂದೆ ಚುನಾವಣಾ ರಾಜಕೀಯ ಅಲ್ಲದೆ ಇನ್ನೇನು ಇಲ್ಲ ಎಂದವರು ದೂರಿದರು.

ಸಮಾಜದಲ್ಲಿ ಸಂಘಟನೆಗಳ ಹೆಸರಿನಲ್ಲಿ, ಸಮಾಜ ಸೇವಕ-ಸುಧಾಕರ ಹೆಸರಿನಲ್ಲಿ ನೀಚ ಕೃತ್ಯ ಎಸಗುವ ಆರೋಪಿಗಳಿಗೆ ಕಠಿಣ ಕಾನೂನು ಕ್ರಮ ಜರುಗಿಸಿ ಕಠಿಣ ಶಿಕ್ಷೆಯಾಗುವಂತೆ ಸಂಬಂಧಪಟ್ಟ ಇಲಾಖಾಧಿಕಾರಿಗಳು ಮೈಚಳಿ ಬಿಟ್ಟು ಕಾರ್ಯ ಪ್ರವೃತ್ತರಾಗಬೇಕು ಎಂದು ಆಗ್ರಹಿಸಿದ ರೈ ಇಂತಹ ಕೃತ್ಯಗಳನ್ನು ಬಂಟ್ವಾಳ ಕಾಂಗ್ರೆಸ್ ಕಠಿಣ ಶಬ್ದಗಳಲ್ಲಿ ಖಂಡಿಸುತ್ತದೆ ಎಂದರು.

ಜಿಲ್ಲೆಯಲ್ಲಿ ವ್ಯಾಪಕವಾಗಿ ಹಬ್ಬಿರುವ ಡ್ರಗ್ಸ್ ಮಾಫಿಯಾ ವಿರುದ್ದವೂ ಬಂಟ್ವಾಳದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಮಾಧ್ಯಮ ಮಿತ್ರರನ್ನು ಸೇರಿಸಿಕೊಂಡು ಬೃಹತ್ ಅಭಿಯಾನವನ್ನು ಶೀಘ್ರದಲ್ಲೇ ಹಮ್ಮಿಕೊಳ್ಳಲಾಗುವುದು, ಸಮಾಜದಲ್ಲಿ ನಡೆಯುತ್ತಿರುವ ಸಮಾಜದ್ರೋಹಿ ಕೃತ್ಯಗಳಿಗೆ ಡ್ರಗ್ಸ್ ವ್ಯಸನ ಕೂಡಾ ಹಲವು ಬಾರಿ ಕಾರಣವಾಗುತ್ತಿರುವ ಹಿನ್ನಲೆಯಲ್ಲಿ ಡ್ರಗ್ಸ್ ಪೆಡ್ಲರ್ ಗಳು ಹಾಗೂ ವ್ಯಸನಿಗಳ ವಿರುದ್ದವೂ ಪೊಲೀಸ್ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ರೈ ಆಗ್ರಹಿಸಿದರು.

ಈ ಸಂದರ್ಭ ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬ್ಲಾಕ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷರುಗಳಾದ ಇಬ್ರಾಹಿಂ ನವಾಝ್ ಬಡಕಬೈಲು, ಸುರೇಶ್ ಜೋರಾ ತಾ.ಪಂ.ಮಾಜಿ ಉಪಾಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಪುರಸಭಾ ಅಧ್ಯಕ್ಷ ಮುಹಮ್ಮದ್ ಶರೀಫ್, ಬೂಡ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಮಾಣಿ ಗ್ರಾ.ಪಂ.ಅದ್ಯಕ್ಷ ಬಾಲಕೃಷ್ಣ ಆಳ್ವ ಉಪಸ್ಥಿತರಿದ್ದರು.